ADVERTISEMENT

ಹಿಮಾಚಲಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ: ಡಿಕೆಶಿ

ಏಜೆನ್ಸೀಸ್
Published 29 ಫೆಬ್ರುವರಿ 2024, 12:29 IST
Last Updated 29 ಫೆಬ್ರುವರಿ 2024, 12:29 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಶಿಮ್ಲಾ: ‘ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ. ಐದು ವರ್ಷಗಳ ಅಧಿಕಾರಾವಧಿಯನ್ನು ಪಕ್ಷ ಪೂರ್ಣಗೊಳಿಸಲಿದೆ’ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟಿನಿಂದಾಗಿ ಕಾಂಗ್ರೆಸ್‌ನ ಕೆಲ ಶಾಸಕರು ಅಡ್ಡ ಮತದಾನ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದರು. ಇದರಿಂದಾಗಿ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಪರಾಭವಗೊಂಡಿದ್ದರು. ಬಿಕ್ಕಟ್ಟು ಶಮನಕ್ಕಾಗಿ ಶಿವಕುಮಾರ್ ಅವರನ್ನು ವೀಕ್ಷಕರನ್ನಾಗಿ ಎಐಸಿಸಿ ನೇಮಿಸಿತ್ತು.

ADVERTISEMENT

ರಾಜ್ಯಕ್ಕೆ ಭೇಟಿ ನೀಡಿದ ಶಿವಕುಮಾರ್ ಅವರು ಮುಖಂಡರಾದ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್ ಅವರನ್ನು ಶಿಮ್ಲಾದಲ್ಲಿ ಭೇಟಿ ಮಾಡಿದರು. ‘ಎಲ್ಲಾ ಸಮಸ್ಯೆಗಳೂ ಬಗೆಹರಿದಿವೆ. ಎಲ್ಲಾ ಶಾಸಕರ ಅಹವಾಲುಗಳನ್ನೂ ಆಲಿಸಲಾಗುತ್ತಿದೆ. ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದಿದ್ದಾರೆ.

ಸಭೆಯ ನಂತರ ವೀಕ್ಷಕರಾದ ಡಿ.ಕೆ.ಶಿವಕುಮಾರ್ ಮತ್ತು ಭೂಪಿಂದರ್ ಸಿಂಗ್ ಹೂಡಾ ಶಿಮ್ಲಾದಿಂದ ತೆರಳಿದರು. ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆವರೆಗೂ ಸುಖ್ವಿಂದರ್ ಸಿಂಗ್ ಸುಖು ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎಂದೆನ್ನಲಾಗಿದೆ. ಹಿಮಾಚಲಪ್ರದೇಶದ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟಿನ ಕುರಿತ ವರದಿಯನ್ನು ಈ ಇಬ್ಬರು ವೀಕ್ಷಕರು ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಿದ್ದಾರೆ ಎಂದೆನ್ನಲಾಗಿದೆ.

ರಾಜ್ಯಸಭೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಜನ ಕಾಂಗ್ರೆಸ್ ಶಾಸಕರನ್ನು ಹಿಮಾಚಲಪ್ರದೇಶದ ವಿಧಾನಸಭೆಯ ಅಧ್ಯಕ್ಷ ಕುಲದೀಪ್ ಸಿಂಗ್ ಫಠಾಣಿಯಾ ಅವರು ಗುರುವಾರ ಅನರ್ಹಗೊಳಿಸಿದ್ದಾರೆ. 

68 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ 40 ಶಾಸಕರನ್ನು ಹಾಗೂ ಬಿಜೆಪಿ 25 ಶಾಸಕರನ್ನೂ ಹೊಂದಿದೆ. 3 ಜನ ಪಕ್ಷೇತರ ಶಾಸಕರು ಇದ್ದಾರೆ.

ಈ ನಡುವೆ 6 ಶಾಸಕರ ಅನರ್ಹತೆ ನಂತರ ವಿಧಾಸಭೆಯಲ್ಲಿ ಉಳಿದ 62 ಶಾಸಕರಲ್ಲಿ ಕಾಂಗ್ರೆಸ್‌ ಸದಸ್ಯಬಲ 32 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.