ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಾಯಕರು ಜೈಲಿನಲ್ಲಿರುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಶನಿವಾರ ಎಎಪಿ ಪ್ರಧಾನ ಕಚೇರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಜೂನ್ 4 ರಂದು ಇಂಡಿಯಾ ಮೈತ್ರಿ ಕೂಟ ಸರ್ಕಾರ ರಚಿಸಲಿದೆ ಎಂದು ಪ್ರತಿಪಾದಿಸಿದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಕಳೆದ 20 ಗಂಟೆಗಳಲ್ಲಿ ನಾನು ಚುನಾವಣಾ ತಜ್ಞರು ಹಾಗೂ ಜನರೊಂದಿಗೆ ಮಾತನಾಡಿದ್ದೇನೆ. ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುವುದನ್ನು ತಿಳಿದುಕೊಂಡಿದ್ದೇನೆ. ಎಎಪಿ ಕೇಂದ್ರ ಸರ್ಕಾರದ ಭಾಗವಾಗಲಿದೆ. ನಾವು ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ಪಡೆಯುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರ ಮತ ಕೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು. ನಾನು ಬಿಜೆಪಿಯನ್ನು ಪ್ರಶ್ನಿಸುತ್ತೇನೆ. ಅವರ ಪ್ರಧಾನಿ ಯಾರು. ಮುಂದಿನ ಸೆಪ್ಟೆಂಬರ್ 17 ರಂದು ಮೋದಿ ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. 75 ವರ್ಷದವರು ನಿವೃತ್ತರಾಗುತ್ತಾರೆ ಎಂದು ಅವರೇ ನಿಯಮ ಮಾಡಿದ್ದರು. ಅದರಂತೆ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಸುಮಿತ್ರಾ ಮಹಾಜನ್ ಅವರನ್ನು ನಿವೃತ್ತಿಗೊಳಿಸಿದ್ದಾರೆ. ಮುಂದಿನ ವರ್ಷ ಅವರೇ ನಿವೃತ್ತರಾಗುತ್ತಾರೆ. ಹಾಗಾಗಿ ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ. ಶಾ ಮೋದಿ ಅವರ ಭರವಸೆಯನ್ನು ಪೂರೈಸುತ್ತಾರೆಯೇ ಎಂದು ಪ್ರಶ್ನಿಸಿದರು.
ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಎರಡು ತಿಂಗಳೊಳಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಬದಲಾಯಿಸಲಿದೆ ಎಂದೂ ಕೇಜ್ರಿವಾಲ್ ಹೇಳಿದರು.
ರಾಜೀನಾಮೆ ನೀಡದಿರಲು ಕಾರಣವೇನು ಎಂಬುದರ ಕುರಿತು ಮಾತನಾಡಿದ ಕೇಜ್ರಿವಾಲ್, 'ನನಗೆ ಮುಖ್ಯಮಂತ್ರಿ ಸ್ಥಾನ ಮುಖ್ಯವಲ್ಲ, ನಕಲಿ ಕೇಸ್ ಹಾಕಿ ರಾಜೀನಾಮೆ ನೀಡುವಂತೆ ಷಡ್ಯಂತ್ರ ರೂಪಿಸಿದ್ದರಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿಲ್ಲ' ಎಂದರು.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಗ್ಗೆ ಪ್ರಧಾನಿ ಮೋದಿ ಕಲಿಯಲು ಬಯಸಿದರೆ, ಅವರು ಅರವಿಂದ ಕೇಜ್ರಿವಾಲ್ ಅವರಿಂದ ಕಲಿಯಬೇಕು. ನಾವು ಭ್ರಷ್ಟರನ್ನು, ನಮ್ಮ ಮಂತ್ರಿಗಳನ್ನು ಸಹ ಜೈಲಿಗೆ ಕಳುಹಿಸಿದ್ದೇವೆ. ಆದರೆ ಪ್ರಧಾನಿ ಎಎಪಿಯ ನಾಲ್ವರು ಪ್ರಮುಖ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಎಎಪಿಯನ್ನು ಹತ್ತಿಕ್ಕಲು ಯತ್ನಿಸಿದ್ದಾರೆ ಎಂದೂ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.