ADVERTISEMENT

ಆ.15ರಿಂದ ಎಲ್ಲಾ ಪಂಚಾಯಿತಿಗಳಲ್ಲಿ ಡಿಜಿಟಲ್‌ ಪಾವತಿ: ಕೇಂದ್ರ

ಪಿಟಿಐ
Published 29 ಜೂನ್ 2023, 16:44 IST
Last Updated 29 ಜೂನ್ 2023, 16:44 IST
   

ನವದೆಹಲಿ : ಆ.15 ರಿಂದ ದೇಶದಾದ್ಯಂತ ಎಲ್ಲಾ ಪಂಚಾಯಿತಿಗಳು ಅಭಿವೃದ್ಧಿ ಕಾರ್ಯಗಳಿಗೆ ಹಣ ಪಾವತಿಸಲು ಹಾಗೂ ಕಂದಾಯ ಸಂಗ್ರಹಕ್ಕೆ ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಸುವುದು ಕಡ್ಡಾಯ ಎಂದು ಕೇಂದ್ರ ಪಂಚಾಯತಿ ರಾಜ್‌ ಸಚಿವಾಲಯ ಹೇಳಿದೆ. ಎಲ್ಲ ಪಂಚಾಯಿತಿಗಳು ಯುಪಿಐ ವ್ಯವಸ್ಥೆ ಹೊಂದಿವೆ ಎಂಬುದನ್ನು ಅಂದು ಘೋಷಿಸಲಾಗುವುದು.

ಮುಖ್ಯಮಂತ್ರಿ, ಸಂಸದರು, ಶಾಸಕರು ಮೊದಲಾದ ಅತಿಥಿಗಳು ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ‘ಯುಪಿಐ ಪಾವತಿ ವ್ಯವಸ್ಥೆ ಹೊಂದಿರುವ ಪಂಚಾಯಿತಿ’ ಎಂಬುದಾಗಿ ಘೋಷಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಸಚಿವಾಲಯ ತಿಳಿಸಿದೆ.

‘ಶೇ 98ರಷ್ಟು ಪಂಚಾಯಿತಿಗಳು ಯುಪಿಐ ಪಾವತಿ ವ್ಯವಸ್ಥೆಯನ್ನು ಈಗಾಗಲೇ ಬಳಕೆ ಮಾಡುತ್ತಿವೆ’ ಎಂದು ಪಂಚಾಯಿತಿ ರಾಜ್‌ ಸಚಿವಾಲಯದ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

‘ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆ (ಪಿಎಂಎಫ್‌ಎಸ್‌) ಮೂಲಕ ಸುಮಾರು ₹1.5 ಲಕ್ಷ ಕೋಟಿ ಮೌಲ್ಯದ ಪಾವತಿಗಳನ್ನು ಮಾಡಲಾಗಿದೆ. ಪಂಚಾಯಿತಿಗಳಲ್ಲಿ ಚೆಕ್‌ ಮತ್ತು ನಗದು ವಾವತಿಯನ್ನು ಬಹುತೇಕ ನಿಲ್ಲಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಯುಪಿಐ ವೇದಿಕೆಗಳಾದ ಜಿಪೇ, ಫೋನ್‌ ಪೇ, ಪೇಟಿಎಂ, ಭೀಮ್‌, ಮೋಬಿಕ್ವಿಕ್‌, ವಾಟ್ಸ್‌ಆ್ಯಪ್‌ ಪೇ, ಅಮೆಜಾನ್‌ ಪೇ ಮತ್ತು ಭಾರತ್‌ ಪೇ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸುವಂತೆ ಪಂಚಾಯಿತಿಗಳಿಗೆ ಈ ಹಿಂದೆ ಸೂಚಿಸಲಾಗಿತ್ತು. ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಸೇವಾದಾತರನ್ನು ಆಯ್ಕೆ ಮಾಡುವಂತೆಯೂ ನಿರ್ದೇಶನ ನೀಡಲಾಗಿತ್ತು ಎಂದಿದ್ದಾರೆ.

ಈ ಸಂಬಂಧ ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದಲ್ಲಿ ಅಧಿಕಾರಿಗಳಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಪಂಚಾಯಿತಿ ರಾಜ್‌ ರಾಜ್ಯ ಸಚಿವ ಕಪಿಲ್‌ ಮೋರೇಶ್ವರ್‌ ಪಾಟೀಲ್‌ ಹೇಳಿದ್ದಾರೆ. ಡಿಜಿಟಲ್‌ ಪಾವತಿ ವ್ಯವಸ್ಥೆಯು ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಸಹಾಯವಾಗಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.