ADVERTISEMENT

ಇಂದಿನಿಂದ ಸಂಸತ್‌ನ ಬಜೆಟ್‌ ಅಧಿವೇಶನ | ಸದನದಲ್ಲಿ ಸಂಘರ್ಷ: ವಿಪಕ್ಷ ಸಜ್ಜು

ವಿವಾದಾತ್ಮಕ ವಿಷಯಗಳ ಪ್ರಸ್ತಾಪ

ಪಿಟಿಐ
Published 21 ಜುಲೈ 2024, 22:30 IST
Last Updated 21 ಜುಲೈ 2024, 22:30 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ನವದೆಹಲಿ: ‘ನೀಟ್‌–ಯುಜಿ’ ಹಾಗೂ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ಕಾವಡ್ ಯಾತ್ರೆಗೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಆದೇಶ ಸೇರಿದಂತೆ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಹೀಗಾಗಿ, ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಬಜೆಟ್‌ ಅಧಿವೇಶನವು ಕಾವೇರಿದ ಚರ್ಚೆ, ಕೋಲಾಹಲಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.

ಬಜೆಟ್‌ ಅಧಿವೇಶನವು ಸುಸೂತ್ರವಾಗಿ ನಡೆಯಲು ಎಲ್ಲ ಪಕ್ಷಗಳು ಸಹಕಾರ ನೀಡಬೇಕು. ಇದು ಸಾಮೂಹಿಕ ಹೊಣೆಗಾರಿಕೆ ಎಂಬುದಾಗಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮನವಿ ಮಾಡಿದರು.

ADVERTISEMENT

ಆದರೆ, ಹಲವು ವಿವಾದಾತ್ಮಕ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ನೀಡಲೇಬೇಕು ಎಂಬುದಾಗಿ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷಗಳ ನಾಯಕರು ಖಂಡತುಂಡವಾಗಿ ಹೇಳುವ ಮೂಲಕ, ಸದನದಲ್ಲಿ ಹೋರಾಟಕ್ಕೆ ತಾವು ಸಜ್ಜಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆ ವಹಿಸಿದ್ದ ಸರ್ವಪಕ್ಷಗಳ ಸಭೆಯು ಮೂರು ಗಂಟೆ ನಡೆಯಿತು. ಇದೇ ಮೊದಲ ಬಾರಿಗೆ, ಏಕೈಕ ಸಂಸದರನ್ನು ಹೊಂದಿರುವ ಪಕ್ಷಗಳಿಗೂ ಸಭೆಗೆ ಆಹ್ವಾನ ನೀಡಲಾಗಿತ್ತು. 44 ಪಕ್ಷಗಳ 55 ನಾಯಕರು ಸಭೆಯಲ್ಲಿ ಪಾಲ್ಗೊಡಿದ್ದರು.

ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ‘ಹುತಾತ್ಮರ ದಿನ’ ರ‍್ಯಾಲಿ ಕಾರಣದಿಂದ ಟಿಎಂಸಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಹಲವು ಬೇಡಿಕೆ–ವಿಷಯ ಪ್ರಸ್ತಾಪ: ಲೋಕಸಭೆಯ ಉಪ ಸ್ಪೀಕರ್‌ ಸ್ಥಾನವನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಬೇಕು. ಇದು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ ಎಂದು ಕಾಂಗ್ರೆಸ್‌ ಪ್ರತಿಪಾದಿಸಿತು. ‘ಇಂಡಿಯಾ’ ಒಕ್ಕೂಟದ ಅಂಗಪಕ್ಷಗಳು ಈ ಬೇಡಿಕೆಯನ್ನು ಬೆಂಬಲಿಸಿದವು ಎಂದು ಕಾಂಗ್ರೆಸ್‌ ನಾಯಕ ಕೆ.ಸುರೇಶ್‌, ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

‘ಜಮ್ಮು–ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ದಾಳಿ, ಮಣಿಪುರದಲ್ಲಿನ ಪರಿಸ್ಥಿತಿ, ರೈಲು ಅಪಘಾತಗಳು, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಂತ ವಿಷಯಗಳು ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸುವ ಅಗತ್ಯವನ್ನು ಸಭೆಯಲ್ಲಿ ವಿವರಿಸಿದ್ದೇವೆ’ ಎಂದೂ ಹೇಳಿದರು.

‘ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ರಾಜೀನಾಮೆ, ವಿವಿಧ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆಯೂ ಚರ್ಚೆ ನಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟೆವು’ ಎಂದರು.

ಕಾವಡ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕು ಎಂಬುದಾಗಿ ಉತ್ತರ ಪ್ರದೇಶ ಹೊರಡಿಸಿರುವ ಆದೇಶವು ವಿರೋಧ ಪಕ್ಷಗಳ ಕೈಗೆ ದೊಡ್ಡ ಅಸ್ತ್ರವಾಗಿದೆ. ಇದನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಚಾಟಿ ಬೀಸಲು ಕಾಂಗ್ರೆಸ್‌, ಡಿಎಂಕೆ, ಎಎಪಿ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಅಂಗಪಕ್ಷಗಳು ಸಜ್ಜಾಗಿವೆ.

ಎನ್‌ಡಿಎ ಅಂಗಪಕ್ಷಗಳು ಸಹ ಈ ಆದೇಶ ಕುರಿತಂತೆ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿವೆ. ಹೀಗಾಗಿ, ಈ ವಿಚಾರವು ಕಲಾಪದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗುವ ಎಲ್ಲ ಸಾಧ್ಯತೆಗಳೂ ಇವೆ.

* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದ ಮಂಗಳವಾರ ಬಜೆಟ್‌ ಮಂಡನೆ * ಆಗಸ್ಟ್‌ 12ರ ವರೆಗೆ ಬಜೆಟ್ ಅಧಿವೇಶನ * 6 ಮಸೂದೆಗಳ ಮಂಡನೆ ನಿರೀಕ್ಷೆ

ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿವಿಧ ಪಕ್ಷಗಳು ಬೇಡಿಕೆ ಮುಂದಿಟ್ಟವು. ಬಿಹಾರ ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕ್ರಮವಾಗಿ ಜೆಡಿಯು ವೈ.ಎಸ್‌.ಆರ್‌. ಕಾಂಗ್ರೆಸ್‌ ಪಕ್ಷ ಹಾಗೂ ಬಿಜೆಡಿ ಆಗ್ರಹಿಸಿದವು. ಆದರೆ ಆಂಧ್ರಪ್ರದೇಶದಲ್ಲಿ ಇತ್ತೀಚೆಗಷ್ಟೆ ಅಧಿಕಾರಕ್ಕೆ ಬಂದಿರುವ ಟಿಡಿಪಿ ಈ ವಿಚಾರವಾಗಿ ಮೌನ ವಹಿಸಿತ್ತು.  ಈ ನಿಲುವನ್ನು ಪ್ರಸ್ತಾಪಿಸಿ ‘ಎಕ್ಸ್‌‘ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ‘ರಾಜ್ಯಕ್ಕೆ ವಿಶೇಷ ಸ್ಥಾನಮಾನ ಬೇಕು ಎಂಬ ವಿಚಾರವಾಗಿ ಟಿಡಿಪಿ ಮೌನವಹಿಸಿದ್ದು ಅಚ್ಚರಿದಾಯಕ’ ಎಂದು ಕುಟುಕಿದ್ದಾರೆ. ಎನ್‌ಡಿಎ ಹಾಗೂ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಅಂಗಪಕ್ಷಗಳು ಕೂಡ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿದವು. ಬಿಜೆಪಿ ಮಿತ್ರಪಕ್ಷಗಳಾದ ಜೆಡಿಯುನ ಸಂಜಯಕುಮಾರ್‌ ಝಾ ಎಲ್‌ಜೆಪಿಯ ನಾಯಕ ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಅವರು ವಿಶೇಷ ಸ್ಥಾನಮಾನದ ಬೇಡಿಕೆಗೆ ಬೆಂಬಲಿಸಿದರು. ಈ ಮಾತಿಗೆ ಆರ್‌ಜೆಡಿ ಕೂಡ ದನಿಗೂಡಿಸಿತು. ‘ವಿಶೇಷ ಸ್ಥಾನಮಾನ ಕೊಡಲು ಸಾಧ್ಯವಿಲ್ಲ ಎಂದಾದಲ್ಲಿ ವಿಶೇಷ ಹಣಕಾಸು ನೆರವು ನೀಡಬೇಕು’ ಎಂದು ಝಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.