ADVERTISEMENT

ತಿರುಮಲದಲ್ಲಿ ಕೆಲಸ ಮಾಡುವವರೆಲ್ಲ ಹಿಂದೂಗಳೇ ಆಗಿರಬೇಕು: ಟಿಟಿಡಿ ನೂತನ ಅಧ್ಯಕ್ಷ

ಪಿಟಿಐ
Published 31 ಅಕ್ಟೋಬರ್ 2024, 11:14 IST
Last Updated 31 ಅಕ್ಟೋಬರ್ 2024, 11:14 IST
ಟಿಟಿಡಿ
ಟಿಟಿಡಿ   

ಹೈದರಾಬಾದ್: ಶ್ರೀವೇಂಕಟೇಶ್ವರನ ಸನ್ನಿಧಾನ ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌(ಟಿಟಿಡಿ) ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ಆರ್‌. ನಾಯ್ಡು ಹೇಳಿದ್ದಾರೆ.

ಅನ್ಯ ಧರ್ಮಗಳಿಗೆ ಸೇರಿದ ಸಿಬ್ಬಂದಿಯನ್ನು ಹೇಗೆ ನಿರ್ವಹಿಸಬೇಕು. ಅವರನ್ನು ಸರ್ಕಾರದ ಬೇರೆ ಇಲಾಖೆಗಳಿಗೆ ವರ್ಗ ಮಾಡಬೇಕೇ? ಅಥವಾ ವಿಆರ್‌ಎಸ್(ಸ್ವಯಂ ನಿವೃತ್ತಿ ಯೋಜನೆ) ಅಡಿಗೆ ತರಬೇಕೆ ಎಂಬ ಬಗ್ಗೆ ಎಂಬ ಬಗ್ಗೆ ಆಂಧ್ರ ಪ್ರದೇಶದ ಸರ್ಕಾರದ ಜೊತೆಗೆ ಚರ್ಚಿಸುತ್ತೇನೆ ಎಂದು ನಾಯ್ಡು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ತಿರುಮಲದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳೇ ಆಗಿರಬೇಕು ಎಂಬುದು ನನ್ನ ಮೊದಲ ಪ್ರಯತ್ನವಾಗಿದೆ. ಇದರಲ್ಲಿ ಹಲವು ಸಮಸ್ಯೆಗಳಿವೆ. ನಾವು ಆ ಬಗ್ಗೆ ಪರಿಶೀಲನೆ ನಡೆಸಬೇಕಿದೆ’ಎಂದಿದ್ದಾರೆ.

ADVERTISEMENT

ತಿರುಪತಿ ವೆಂಕಟೇಶ್ವರನ ಕಟ್ಟಾ ಭಕ್ತರಾಗಿರುವ ನಾಯ್ಡು, ಟಿಟಿಡಿ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಿರುವುದು ನನ್ನ ಸೌಭಾಗ್ಯ ಎಂದಿದ್ದಾರೆ. ಈ ಸ್ಥಾನ ನೀಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಎನ್‌ಡಿಎ ಸರ್ಕಾರದ ಇತರೆ ನಾಯಕರಿಗೆ ಧನ್ಯವಾದ ಹೇಳಿದ್ದಾರೆ.

ಈ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಆಡಳಿತಾವಧಿಯಲ್ಲಿ ತಿರುಮಲದಲ್ಲಿ ಬಹಳ ಅಕ್ರಮಗಳು ನಡೆದಿವೆ. ದೇವಸ್ಥಾನ ಪಾವಿತ್ರ್ಯತೆಯನ್ನು ರಕ್ಷಣೆ ಮಾಡಬೇಕು. ನನ್ನ ಕರ್ತವ್ಯ ನಿರ್ವಹಣೆಯನ್ನು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಮಾಡುತ್ತೇನೆ ಎಂದು ಬಿ.ಆರ್. ನಾಯ್ಡು ಹೇಳಿದ್ದಾರೆ.

ಹಿಂದೂ ಭಕ್ತಿ ಚಾನಲ್ ಸೇರಿದಂತೆ ತೆಲುಗು ಟಿವಿ ಚಾನಲ್‌ಗಳನ್ನು ನಡೆಸುತ್ತಿರುವ ಬಿ.ಆರ್‌. ನಾಯ್ಡು ಒಬ್ಬ ಮಾಧ್ಯಮದ ವ್ಯಕ್ತಿಯಾಗಿದ್ದಾರೆ.

ಆಂಧ್ರ ಪ್ರದೇಶ ಸರ್ಕಾರವು ಬುಧವಾರ 24 ಸದಸ್ಯರನ್ನೊಳಗೊಂಡ ನೂತನ ತಿರುಪತಿ ತಿರುಮಲ ದೇವಸ್ಥಾನಮ್ಸ್‌(ಟಿಟಿಡಿ) ಮಂಡಳಿಯನ್ನು ರಚನೆ ಮಾಡಿದೆ. ಈ ಮಂಡಳಿಯು ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತದೆ.

ಹೊಸದಾಗಿ ರಚಿಸಲಾದ ಟಿಟಿಡಿ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರವು ಬಿ ಆರ್ ನಾಯ್ಡು ಅವರನ್ನು ನೇಮಕ ಮಾಡಿದೆ. ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಸಹ ಸಂಸ್ಥಾಪಕಿ ಮತ್ತು ಎಂ.ಡಿ. ಸುಚಿತ್ರಾ ಎಲ್ಲ ಅವರು ಮಂಡಳಿಯ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.