ಸ್ಕಾರ್ಪೀನ್ ಸರಣಿಯ 5ನೇ ಜಲಾಂತರ್ಗಾಮಿ ನೌಕೆ ‘ಐಎನ್‌ಎಸ್ ವಾಗೀರ್’ ಭಾರತೀಯ ನೌಕಾಪಡೆಗೆ ಮಂಗಳವಾರ ಸೇರ್ಪಡೆಯಾಗಿದೆ. ಕ್ಷಿಪಣಿ ನಾಶಕ ಯುದ್ಧನೌಕೆ ‘ಐಎನ್‌ಎಸ್ ಮೊರ್ಮುಗಾವೋ’ ನೌಕಾಪಡೆ ಸೇರಿದ ಕೆಲವೇ ದಿನಗಳಲ್ಲಿ ವಾಗೀರ್ ಜಲಾಂತರ್ಗಾಮಿಯೂ ಸೇರ್ಪಡೆಯಾಗಿದ್ದು, ಬಲ ಹೆಚ್ಚಿಸಿದೆ. ಸದ್ಯದಲ್ಲೇ ಇದು ಕಾರ್ಯಾಚರಣೆಗೆ ಇಳಿಯಲಿದೆ. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾದ ಚಟುವಟಿಕೆಗಳು ಬೆದರಿಕೆಯಾಗಿ ಪರಿಣಮಿಸಿವೆ. ಹೀಗಾಗಿ ಕಡಲಗಡಿಯ ಮೇಲೆ ಭಾರತ ಹೆಚ್ಚು ಗಮನ ಕೇಂದ್ರೀಕರಿಸಿದ್ದು, ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ವೇಗ ನೀಡಿದೆ.
*2020ರ ನ.16ರಂದು ಮೊದಲ ಬಾರಿ ಸಮುದ್ರಕ್ಕಿಳಿದಿದ್ದ ವಾಗಿರ್; 2021ರ ಫೆ.1ರಿಂದ ಪರೀಕ್ಷಾರ್ಥ ಚಾಲನೆ. 22 ತಿಂಗಳ ದೀರ್ಘಾವಧಿ ಪರೀಕ್ಷೆ ಯಶಸ್ವಿ
*ಉಳಿದ ನೌಕೆಗಳಿಗೆ ಹೋಲಿಸಿದರೆ, ಕಡಿಮೆ ಅವಧಿಯಲ್ಲಿ ಶಸ್ತ್ರಾಸ್ತ್ರ, ಸೆನ್ಸರ್ ಪರೀಕ್ಷೆಗಳು ಪೂರ್ಣ
*ನಿಗದಿಗಿಂತ ಒಂದು ತಿಂಗಳ ಮೊದಲೇ ವಾಗೀರ್ ಕರ್ತವ್ಯಕ್ಕೆ ಹಾಜರ್
*ಐಎನ್‌ಎಸ್ ವಾಗೀರ್ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕದನ ಸಾಮರ್ಥ್ಯ ಹೆಚ್ಚಳ
*ಸರಣಿಯ ಮೊದಲ ನಾಲ್ಕು ಜಲಾಂತರ್ಗಾಮಿಗಳು ಈಗಾಗಲೇ ಸೇವೆಯಲ್ಲಿವೆ.ಸರಣಿಯ ಕೊನೆಯ ಹಾಗೂ 6ನೇ ಜಲಾಂತರ್ಗಾಮಿ ನೌಕೆ ‘ಐಎನ್‌ಎಸ್ ವಾಗ್‌ಶೀರ್’ನ ಪ್ರಾಯೋಗಿಕ ಚಾಲನೆ ಇದೇ ಏಪ್ರಿಲ್ 20ರಂದು ಆರಂಭವಾಗಿದೆ
ನೌಕೆ ಸಾಮರ್ಥ್ಯಗಳು
*ಸಾಗರದಾಳದಲ್ಲಿ ಸ್ಫೋಟಕಗಳನ್ನು (ಮೈನ್‌ಗಳು) ಹಾಕುವ ಸಾಮರ್ಥ್ಯ
*ನೀರಿನಡಿಯಲ್ಲಿ ಜಲಾಂತರ್ಗಾಮಿ ನೌಕೆಗಳು ಮೇಲೆ ಮತ್ತು ನೀರಿನ ಮೇಲ್ಮೈನಲ್ಲಿ ಯುದ್ಧನೌಕೆಗಳ ಮೇಲೆ ದಾಳಿ ನಡೆಸುವ ಕ್ಷಿಪಣಿ ತಂತ್ರಜ್ಞಾನ
*ಗುಪ್ತಚರ ಮಾಹಿತಿ ಸಂಗ್ರಹಣೆ,ಸಾಗರದ ವ್ಯಾಪ್ತಿಯಲ್ಲಿ ನಿಗಾ
*ಎಲ್ಲ ವಾತಾವರಣದಲ್ಲೂ ಕಾರ್ಯಾಚರಣೆ ಸಾಮರ್ಥ್ಯ
*ದೀರ್ಘಾವಧಿಯವರೆಗೆ ನೀರಿನಾಳದಲ್ಲಿ ಕಾರ್ಯಾಚರಣೆ ಸಾಮರ್ಥ್ಯ
ತಂತ್ರಜ್ಞಾನದ ಮೇಳ
ಜಲಾಂತರ್ಗಾಮಿಯಲ್ಲಿ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ.ನೀರಿನಡಿಯಲ್ಲಿ ಗಾಳಿಯ ಸಹಾಯವಿಲ್ಲದೇ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ (ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ಪ್ಲಾಂಟ್) ಈ ಜಲಾಂತರ್ಗಾಮಿಯ ಗರಿಮೆ. ಸಾಗರದಲ್ಲಿ ಶಬ್ದ ನಿಗ್ರಹಿಸುವ ತಂತ್ರಜ್ಞಾನ,ವಿಕಿರಣ ಶಬ್ದ ಮಟ್ಟವನ್ನು ತಗ್ಗಿಸುವ ತಂತ್ರಜ್ಞಾನ ಬಳಸಲಾಗಿದೆ.ನೀರಿನಲ್ಲಿ ಕಾರ್ಯಾಚರಣೆ ನಡೆಸಲು ಅನುವಾಗುವ ವಿನ್ಯಾಸವಿದೆ. ನೌಕೆಯಲ್ಲಿ ಆಧುನಿಕ ಉಪಕರಣಗಳು, ಶಸ್ತ್ರಾಸ್ತ್ರ, ಸೆನ್ಸರ್, ಟಾರ್ಪೆಡೋ, ಆಧುನಿಕ ಕ್ಷಿಪಣಿಗಳಿವೆ. ಈ ಸರಣಿಯ ಜಲಾಂತರ್ಗಾಮಿಗಳು ಬೆದರಿಕೆಗಳನ್ನು ನಿಷ್ಫಲಗೊಳಿಸುವ ತಂತ್ರಗಾರಿಕೆಯಲ್ಲಿ ಮುಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.