ADVERTISEMENT

ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ

ಪಿಟಿಐ
Published 3 ಆಗಸ್ಟ್ 2023, 5:28 IST
Last Updated 3 ಆಗಸ್ಟ್ 2023, 5:28 IST
   

ಲಖನೌ/ವಾರಾಣಸಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ಎಎಸ್‌ಐ) ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮುಸ್ಲಿಂ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್‌ ಹೈಕೋರ್ಟ್‌ ಗುರುವಾರ ತಿರಸ್ಕರಿಸಿದ್ದು, ಸಮೀಕ್ಷೆ ನಡೆಸಲು ಅನುಮತಿ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್ ದಿವಾಕರ್ ಅವರಿದ್ದ ನ್ಯಾಯಪೀಠ, ‘ಜಿಲ್ಲಾ ನ್ಯಾಯಾಲಯದ ಆದೇಶ ನ್ಯಾಯಬದ್ಧ ಹಾಗೂ ಸಮರ್ಪಕವಾಗಿದ್ದು, ಈ ವಿಷಯದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ’ ಎಂಬ ಮಹತ್ವದ ತೀರ್ಪು ನೀಡಿದೆ.


ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವೈಜ್ಞಾನಿಕ ಸಮೀಕ್ಷೆಯನ್ನು ಶುಕ್ರವಾರವೇ ಆರಂಭಿಸುವ ಸಾಧ್ಯತೆ ಇದೆ. ಸಮೀಕ್ಷೆ ಕಾರ್ಯಕ್ಕೆ ನೆರವು ನೀಡುವಂತೆ ಕೋರಿ ಇಲಾಖೆಯು ವಾರಾಣಸಿ ಜಿಲ್ಲಾಡಳಿತವನ್ನು ಸಂಪರ್ಕಿಸಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ವಾರಾಣಸಿ ಜಿಲ್ಲಾಧಿಕಾರಿ ಎಸ್‌.ರಾಜಲಿಂಗಮ್, ‘ಎಎಸ್‌ಐ ನಡೆಸಲಿರುವ ವೈಜ್ಞಾನಿಕ ಸಮೀಕ್ಷೆಗೆ ಸಾಧ್ಯವಾದ ಎಲ್ಲ ನೆರವನ್ನು ಜಿಲ್ಲಾಡಳಿತ ನೀಡಲಿದೆ’ ಎಂದಿದ್ದಾರೆ.

ವಿಚಾರಣೆ: ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ಸೂಚಿಸಿ ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಬೇಕು ಎಂದು ಅಂಜುಮನ್‌ ಇಂತೆಜಾಮಿಯಾ ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು. ಕಳೆದ ವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ತೀರ್ಪನ್ನು ಕಾಯ್ದಿರಿಸಿತ್ತು.

ಗುರುವಾರ ಅರ್ಜಿ ವಿಚಾರಣೆ ವೇಳೆ, ‘ನ್ಯಾಯ ನಿರ್ಣಯ ದೃಷ್ಟಿಯಿಂದ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ‘ಮಸೀದಿ ಆವರಣದಲ್ಲಿ ಅಗೆಯುವ ಕಾರ್ಯ ನಡೆಸಬಾರದು. ವಜುಖಾನಾ ಹೊರತುಪಡಿಸಿ ಉಳಿದ ಭಾಗದಲ್ಲಿ ಸಮೀಕ್ಷೆ ನಡೆಸಬೇಕು’ ಎಂದು ಸೂಚಿಸಿತು.

ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣುಶಂಕರ್ ಜೈನ್‌, ‘ಮಸೀದಿಗೆ ಧಕ್ಕೆಯಾಗದಂತೆ ಸಮೀಕ್ಷೆ ನಡೆಸಲಾಗುವುದು ಎಂದು ಎಎಸ್‌ಐ ಈ ಹಿಂದೆಯೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದು, ಅದರಂತೆಯೇ ಸಮೀಕ್ಷೆ ನಡೆಸಲಾಗುತ್ತದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಈ ಹಿಂದೆ, ನ್ಯಾಯಾಲಯದ ಸೂಚನೆಯಂತೆ ನೇಮಕಗೊಂಡಿದ್ದ ಆಯುಕ್ತರು ಸಮೀಕ್ಷೆ ನಡೆಸಿದ್ದರು. ಮಸೀದಿಯಲ್ಲಿ ಸ್ವಸ್ತಿಕ ಇದ್ದ ಬಗ್ಗೆ ಆಗ ಸಾಕ್ಷ್ಯ ಲಭ್ಯವಾಗಿತ್ತು. ಇದು ಆ ಕಟ್ಟಡ (ಜ್ಞಾನವಾಪಿ) ದೇವಸ್ಥಾನ ಎಂಬುದನ್ನು ಸೂಚಿಸುವಂತಿತ್ತು. ರಾಮ ಜನ್ಮಭೂಮಿ ಪ್ರಕರಣದಂತೆಯೆ, ಈ ವಿಷಯದಲ್ಲಿಯೂ ನಿರ್ಣಾಯಕ ಸಾಕ್ಷ್ಯಗಳು ವೈಜ್ಞಾನಿಕ ಸಮೀಕ್ಷೆಯಿಂದ ಹೊರಬರಲಿವೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸಮಿತಿ ಪರ ವಕೀಲ ಎಸ್‌.ಎಫ್‌.ಎ.ನಕ್ವಿ, ‘ನೆಲ ಅಗೆಯಲು ಬಳಸುವ ಹಲವು ಸಲಕರಣೆಗಳನ್ನು ಎಎಸ್‌ಐ ತಂಡ ಮಸೀದಿ ಆವರಣದೊಳಗೆ ತಂದಿದೆ. ಅಗೆಯುವ ಉದ್ದೇಶವನ್ನು ಈ ನಡೆ ತೋರಿಸುತ್ತದೆ. ಸಲಕರಣೆಗಳ ಕುರಿತ ಚಿತ್ರಗಳನ್ನು ಅರ್ಜಿ ಜೊತೆ ಸಲ್ಲಿಸಿದ್ದೇವೆ’ ಎಂದರು.

‘ಎಎಸ್‌ಐ ಸಿಬ್ಬಂದಿ ಕೆಲ ಸಲಕರಣೆಗಳನ್ನು ತಂದಿದ್ದರೂ, ಅವರು ಅಗೆಯುವ ಉದ್ದೇಶ ಹೊಂದಿದ್ದರು ಎಂದು ತೋರುತ್ತಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ದಿವಾಕರ್ ಪ್ರತಿಕ್ರಿಯಿಸಿದರು.

ಸ್ಪಷ್ಟನೆ: ‘ಸಮೀಕ್ಷೆ ನಡೆಸುವ ಸ್ಥಳದಲ್ಲಿನ ಅವಶೇಷಗಳನ್ನು ತೆರವುಗೊಳಿಸುವುದಕ್ಕಾಗಿ ಸಲಕರಣೆಗಳನ್ನು ತರಲಾಗಿದ್ದು, ಅಗೆಯಲು ಅಲ್ಲ’ ಎಂದು ಎಎಸ್‌ಐ ಹೆಚ್ಚುವರಿ ನಿರ್ದೇಶಕ ಅಲೋಕ್‌ ತ್ರಿಪಾಠಿ ಸ್ಪಷ್ಟಪಡಿಸಿದ್ದಾರೆ.

ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ವಾರಾಣಸಿ ನ್ಯಾಯಾಲಯ ಜುಲೈ 21ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಂಜುಮನ್‌ ಇಂತೆಜಾಮಿಯಾ ಮಸೀದಿ ಸಮಿತಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಜುಲೈ 26ರ ಸಂಜೆ 5ರ ವರೆಗೆ ಸಮೀಕ್ಷೆಗೆ ತಡೆ ನೀಡಿತ್ತಲ್ಲದೇ, ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿತ್ತು.

ಜುಲೈ 27ರಂದು ಹಿಂದೂ ಹಾಗೂ ಮುಸ್ಲಿಂ ಅರ್ಜಿದಾರರ ವಾದಗಳನ್ನು ಆಲಿಸಿದ್ದ ಅಲಹಾಬಾದ್ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ದಿವಾಕರ್‌, ತೀರ್ಪು ಕಾಯ್ದಿರಿಸಿದ್ದರು. ಗುರುವಾರದ ವರೆಗೆ ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಿ ಆದೇಶಿಸಿದ್ದರು.

ಸಮೀಕ್ಷೆ: ಹೈಕೋರ್ಟ್‌ ಆದೇಶ ಸ್ವಾಗತಿಸಿದ ಬಿಜೆಪಿ ಲಖನೌ(ಪಿಟಿಐ): ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿ ಅಲಹಾಬಾದ್‌ ಹೈಕೋರ್ಟ್‌ ಆದೇಶಿಸಿರುವುದನ್ನು ಬಿಜೆಪಿಯ ಉತ್ತರಪ್ರದೇಶ ಘಟಕ ಗುರುವಾರ ಸ್ವಾಗತಿಸಿದೆ. ‘ಇದು ಕೋಟ್ಯಂತರ ಜನರ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು ಸಮೀಕ್ಷೆಯಿಂದ ಸತ್ಯಾಂಶ ಹೊರಬರಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್‌ ಚೌಧರಿ ಟ್ವೀಟ್‌ ಮಾಡಿದ್ದಾರೆ. ‘ವೈಜ್ಞಾನಿಕ ಸಮೀಕ್ಷೆಗೆ ಎಲ್ಲರೂ ಸಹಕಾರ ನೀಡಬೇಕು. ನಂತರ ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.