ADVERTISEMENT

ಕೃಷ್ಣಾನಂದ ರಾಯ್ ಹತ್ಯೆ: ಅನ್ಸಾರಿ ಶಿಕ್ಷೆ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 15:45 IST
Last Updated 29 ಜುಲೈ 2024, 15:45 IST
<div class="paragraphs"><p>ಅಲಹಾಬಾದ್ ಹೈಕೋರ್ಟ್</p></div>

ಅಲಹಾಬಾದ್ ಹೈಕೋರ್ಟ್

   

ಪ್ರಯಾಗರಾಜ್: 2005ರಲ್ಲಿ ನಡೆದ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಅವರ ಹತ್ಯೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಅವರನ್ನು ನಾಲ್ಕು ವರ್ಷಗಳ ಜೈಲುಶಿಕ್ಷೆಗೆ ಗುರಿಪಡಿಸಿದ ಗಾಜೀಪುರ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ಅಸಿಂಧುಗೊಳಿಸಿದೆ.

ತಮ್ಮನ್ನು ತಪ್ಪಿತಸ್ಥ ಎಂದು ಘೋಷಿಸಿದ ನ್ಯಾಯಾಲಯದ ಕ್ರಮವನ್ನು ಅನ್ಸಾರಿ ಅವರು ಪ್ರಶ್ನಿಸಿದ್ದರು. ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಕೆ. ಸಿಂಗ್ ಅವರು ಮಾನ್ಯ ಮಾಡಿರುವ ಕಾರಣ, ಅನ್ಸಾರಿ ಅವರು ಸಂಸದರಾಗಿ ಮುಂದುವರಿಯಲು ಇದ್ದ ಅಡ್ಡಿಯು ನಿವಾರಣೆಯಾಗಿದೆ.

ADVERTISEMENT

ಅನ್ಸಾರಿ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಹೆಚ್ಚು ಮಾಡಬೇಕು ಎಂಬ ಕೋರಿಕೆಯೊಂದಿಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ಕೃಷ್ಣಾನಂದ ರಾಯ್ ಅವರ ಮಗ ಪೀಯೂಷ್ ಕುಮಾರ್ ರಾಯ್ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಗಾಜಿಪುರ ನ್ಯಾಯಾಲಯವು 2023ರ ಏಪ್ರಿಲ್‌ನಲ್ಲಿ ಅನ್ಸಾರಿ ಅವರಿಗೆ ನಾಲ್ಕು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಇದರ ಪರಿಣಾಮವಾಗಿ ಅನ್ಸಾರಿ ಅವರು ಸಂಸತ್ ಸದಸ್ಯ ಸ್ಥಾನ ಕಳೆದುಕೊಂಡಿದ್ದರು. ಅನ್ಸಾರಿ ಅವರಿಗೆ ಹೈಕೋರ್ಟ್‌ 2023ರ ಜುಲೈನಲ್ಲಿ ಜಾಮೀನು ಮಂಜೂರು ಮಾಡಿತ್ತು. ಆದರೆ, ಅವರು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದ್ದಕ್ಕೆ ತಡೆ ನೀಡಲಿಲ್ಲ.

ಆದರೆ, ಅನ್ಸಾರಿ ಅವರು ತಪ್ಪಿತಸ್ಥ ಎಂದು ಘೋಷಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ನಂತರ ತಡೆ ನೀಡಿತು. ಆಗ ಅನ್ಸಾರಿ ಅವರಿಗೆ ಲೋಕಸಭಾ ಸದಸ್ಯತ್ವವು ಮರಳಿತು. ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.