ನವದೆಹಲಿ: ‘ಅದಾನಿ ಸಮೂಹವು ಸರ್ಕಾರಿ ಸ್ವಾಮ್ಯದ ತಮಿಳುನಾಡು ವಿದ್ಯುತ್ ಉತ್ಪಾದನಾ ಮತ್ತು ವಿತರಣಾ ನಿಗಮಕ್ಕೆ ಕಳಪೆ ಗುಣಮಟ್ಟದ ಕಲ್ಲಿದ್ದಲ್ಲನ್ನು ಮೂರು ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಿ, ಲಾಭ ಗಳಿಸಿಕೊಂಡಿದೆ’ ಎಂದು ಆರ್ಗನೈಸ್ಡ್ ಕ್ರೈಂ ಆ್ಯಂಡ್ ಕರಪ್ಶನ್ ರಿಪೋರ್ಟ್ ಪ್ರಾಜೆಕ್ಟ್ (ಒಸಿಸಿಆರ್‌ಪಿ) ತನಿಖಾ ವರದಿ ನೀಡಿದೆ.
ಈ ವರದಿಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸರ್ಕಾರವು ರಚನೆಯಾದ ಒಂದು ತಿಂಗಳ ಒಳಗಾಗಿ ಈ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಿ ತನಿಖೆ ನಡೆಸಲಾಗುವುದು’ ಎಂದು ಬುಧವಾರ ಹೇಳಿದೆ. ಆದರೆ, ಒಸಿಸಿಆರ್‌ಪಿ ವರದಿ ಕುರಿತು ಅದಾನಿ ಸಮೂಹವು ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆಯೂ ಈ ಆರೋಪ ಕೇಳಿಬಂದಿತ್ತು. ಆಗ ಸಮೂಹವು ಈ ಎಲ್ಲ ಆರೋಪಗಳನ್ನು ನಿರಾಕರಿಸಿತ್ತು.
ಏನಿದು ‘ಹಗರಣ’?: ‘ಕಳಪೆ ಗುಣಮಟ್ಟದ ಹಾಗೂ ಹೆಚ್ಚು ಬೂದಿ ಹೊರಹೊಮ್ಮುವ ಕಲ್ಲಿದ್ದಲನ್ನು ಅದಾನಿ ಸಮೂಹವು 2014ರಲ್ಲಿ ಇಂಡೊನೇಷ್ಯಾದಿಂದ ಖರೀದಿಸಿದೆ. ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಹೊಗೆ ಹೊಮ್ಮುವ ಕಲ್ಲಿದ್ದಲನ್ನು ನೀಡಲಾಗುವುದು ಎಂದು ಹೇಳಿ, ಮೂರು ಪಟ್ಟು ಹೆಚ್ಚಿನ ಬೆಲೆಗೆ ತಮಿಳುನಾಡು ನಿಗಮಕ್ಕೆ ಅದಾನಿ ಸಮೂಹವು ಮಾರಾಟ ಮಾಡಿದೆ. ಈ ಮೂಲಕ ₹3,000 ಕೋಟಿ ಹೆಚ್ಚಿನ ಲಾಭವನ್ನು ಕಂಪನಿ ಮಾಡಿಕೊಂಡಿದೆ. ಈ ಕಾರಣದಿಂದ ಜನರು ತಮ್ಮ ಜೇಬಿನಿಂದ ದೊಡ್ಡ ಮೊತ್ತದ ಹಣವನ್ನು ವಿದ್ಯುತ್ ಬಿಲ್‌ಗೆ ಪಾವತಿಸಿದ್ದಾರೆ. ಜೊತೆಗೆ ಪರಿಸರಕ್ಕೂ ಹಾನಿಯಾಗಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
‘ವಾಯು ಮಾಲಿನ್ಯದಿಂದ ಪ್ರತಿ ವರ್ಷ 20 ಲಕ್ಷ ಭಾರತೀಯರು ಮೃತಪಡುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಅವರ ಆಪ್ತರಿಗಷ್ಟೇ ಇದು ‘ಅಮೃತ ಕಾಲ’. ಇತರರಿಗೆಲ್ಲಾ ಇದು ‘ವಿಷಕಾಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.