ADVERTISEMENT

ಉತ್ತರ ಪ್ರದೇಶ, ಬಿಹಾರದಲ್ಲಿ ಇವಿಎಂ ದುರ್ಬಳಕೆ; ಸಾಮಾಜಿಕ ತಾಣದಲ್ಲಿ ವಿಡಿಯೊ ವೈರಲ್

ಎಸ್‌ಪಿ, ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 1:24 IST
Last Updated 22 ಮೇ 2019, 1:24 IST
   

ಲಖನೌ: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಎರಡು ದಿನಗಳು ಇರುವಂತೆಯೇ ‘ಮತಯಂತ್ರಗಳನ್ನು ತಿರುಚಲಾಗುತ್ತಿದೆ’ ಎಂಬ ಆರೋಪಗಳು ಇನ್ನಷ್ಟು ಬಲಗೊಂಡಿವೆ.

ಉತ್ತರ ಪ್ರದೇಶದ ಪೂರ್ವಭಾಗದ ವಾರಾಣಸಿ, ಚಂದೌಲಿ, ಮಿರ್ಜಾಪುರ ಹಾಗೂ ಗಾಜಿಪುರ ಜಿಲ್ಲೆಗಳಿಂದ ಸೋಮವಾರ ರಾತ್ರಿ ಮತಯಂತ್ರಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವಿಡಿಯೊಗಳು ವೈರಲ್‌ ಆಗಿವೆ. ಬಿಹಾರ ಮತ್ತು ಪಂಜಾಬ್‌ನಿಂದಲೂ ಇಂತಹ ಆರೋಪಗಳು ಕೇಳಿ ಬಂದಿವೆ.

‘ಇವಿಎಂಗಳನ್ನು ಬದಲಿಸಲಾಗುತ್ತಿದೆ’ ಎಂದು ಆರೋಪಿಸಿಈ ಜಿಲ್ಲೆಗಳ ಎಸ್‌ಪಿ ಹಾಗೂ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ ಕಟ್ಟಡದ ಮುಂದ ಧರಣಿ ಆರಂಭಿಸಿದ್ದಾರೆ.

ADVERTISEMENT

‘ಮತದಾನಕ್ಕೆ ಬಳಸಿದ್ದ ಇವಿಎಂಗಳನ್ನು ರಾತ್ರಿ ವೇಳೆಯಲ್ಲಿ ಹೊರಗೆ ಸಾಗಿಸಲಾಗುತ್ತಿದೆ’ ಎಂದು ಆರೋಪಿಸಿ ಗಾಜಿಪುರ ಕ್ಷೇತ್ರದ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿ ಅಫ್ಜಲ್‌ ಅನ್ಸಾರಿ ಅವರು ಪ್ರತಿಭಟನೆ ನಡೆಸಿದ್ದಾರೆ. ‘ಮತ ಎಣಿಕೆ ಮುಗಿಯುವವರೆಗೂ ಇಲ್ಲಿಯೇ ಕುಳಿತಿರುತ್ತೇವೆ’ ಎಂದಿದ್ದಾರೆ.

‘ಹೊರಗಡೆಯಿಂದ 35 ಮತಯಂತ್ರಗಳನ್ನು ತಂದು ಗಾಜಿಪುರದ ಭದ್ರತಾ ಕೊಠಡಿಯ ಒಳಗೆ ಇಡಲಾಗಿದೆ. ಅಲ್ಲಿಂದ 35 ಇವಿಎಂಗಳನ್ನು ಹೊರತೆಗೆದಾಗ ವಿಚಾರ ಬೆಳಕಿಗೆ ಬಂದಿದೆ’ ಎಂದು ಆರೋಪಿಸಲಾಗಿದೆ.

ಬಳಕೆಯಾಗದ ಇವಿಎಂ:ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗವು, ‘ಮತಯಂತ್ರಗಳ ಸಾಗಾಟದ ಬಗ್ಗೆ ಮಾಡಲಾಗುತ್ತಿರುವ ಆರೋಪಗಳು ಸತ್ಯವಲ್ಲ’ ಎಂದಿದೆ.

ಗಾಜಿಪುರ ಲೋಕಸಭಾ ಕ್ಷೇತ್ರದ ಎಸ್‌ಪಿ–ಬಿಎಸ್‌ಪಿ ಮೈತ್ರಿ ಅಭ್ಯರ್ಥಿ ಅಫ್ಜಲ್‌ ಅನ್ಸಾರಿ ಅವರು ಭದ್ರತಾಕೊಠಡಿಯ ಹೊರಗೆ ಪ್ರತಿಭಟನೆ ನಡೆಸಿದರು

‘ಚುನಾವಣೆಯಲ್ಲಿ ಬಳಸಿದ್ದ ಮತಯಂತ್ರಗಳನ್ನು ಇಟ್ಟಿರುವ ಕೊಠಡಿಯನ್ನು ಮೊಹರು ಮಾಡಲಾಗಿದೆ. ಅಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಭದ್ರತಾ ಪಡೆಗಳ ಸಿಬ್ಬಂದಿ24 ಗಂಟೆಯೂ ಕಾವಲು ಕಾಯುತ್ತಾರೆ. ವಿರೋಧಪಕ್ಷಗಳವರ ಆರೋಪ ನಿರಾಧಾರವಾದುದು’ ಎಂದು ಆಯೋಗದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಮತಯಂತ್ರ ಪ್ರಣವ್‌ ಕಳವಳ

ಮತಯಂತ್ರ ತಿರುಚುವ ವಿಚಾರಕ್ಕೆ ಸಂಬಂಧಿಸಿದಂತೆ ಬರುತ್ತಿರುವ ವರದಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು, ಈ ಕುರಿತ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಪ್ರಣವ್‌, ‘ಪ್ರಜಾಪ್ರಭುತ್ವದ ಮೂಲಕ್ಕೇ ಸವಾಲೊಡ್ಡುವ ಯಾವ ಊಹಾಪೋಹಕ್ಕೂ ಅವಕಾಶ ನೀಡಬಾರದು. ಜನರ ತೀರ್ಪು ಪವಿತ್ರವಾದದ್ದು. ಅಲ್ಲಿ ಒಂದಿಷ್ಟು ಸಂದೇಹಕ್ಕೂ ಅವಕಾಶ ಇರಕೂಡದು’ ಎಂದಿದ್ದಾರೆ.

‘ಸಂಸ್ಥೆಯೊಂದರ (ಆಯೋಗದ) ವಿಶ್ವಾಸಾರ್ಹತೆಯನ್ನು ಉಳಿಸುವುದು ಅದರ ಸಿಬ್ಬಂದಿ ಹೊಣೆ. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಬೇಕು’ ಎಂದು ಅವರು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.