ADVERTISEMENT

ಖಾಲಿಸ್ತಾನಿ ಉಗ್ರ ಪನ್ನೂ ಹತ್ಯೆ ಯತ್ನ ಆರೋಪ: ತನಿಖೆಗೆ ಸಮಿತಿ ರಚಿಸಿದ ಭಾರತ

ಪಿಟಿಐ
Published 29 ನವೆಂಬರ್ 2023, 11:45 IST
Last Updated 29 ನವೆಂಬರ್ 2023, 11:45 IST
ಗುರುಪತ್ವಂತ್‌ ಸಿಂಗ್‌ ಪನ್ನೂ
ಗುರುಪತ್ವಂತ್‌ ಸಿಂಗ್‌ ಪನ್ನೂ   

ನವದೆಹಲಿ: ಅಮೆರಿಕದಲ್ಲಿ ಖಾಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆಗೆ ಯತ್ನಿಸಲಾಗಿತ್ತು ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಾಗ್ಚಿ ಬುಧವಾರ ಹೇಳಿದ್ದಾರೆ.

‘ಈ ಆರೋಪಗಳ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವುದಕ್ಕಾಗಿ ನ.18ರಂದು ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಆಧಾರದ ಮೇಲೆ ಭಾರತ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದಿದ್ದಾರೆ.

‘ಭದ್ರತೆ ಕುರಿತಾಗಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ, ಸಂಘಟಿತ ಅಪರಾಧಿಗಳು, ಶಸ್ತ್ರಾಸ್ತ್ರಗಳ ಮಾರಾಟಗಾರರು ಹಾಗೂ ಉಗ್ರರ ನಡುವಿನ ನಂಟಿನ ಕುರಿತು ಅಮೆರಿಕ ಕೆಲ ಮಾಹಿತಿಗಳನ್ನು ಹಂಚಿಕೊಂಡಿತ್ತು. ಇಂತಹ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭಾರತ ಆಗ ಸ್ಪಷ್ಟಪಡಿಸಿತ್ತು’ ಎಂದು ಹೇಳಿದ್ದಾರೆ.

ADVERTISEMENT

ಖಾಲಿಸ್ತಾನಿ ಉಗ್ರ ಪನ್ನೂ ಹತ್ಯೆಗೆ ನಡೆದಿದ್ದ ಯತ್ನವನ್ನು ಅಮೆರಿಕ ಅಧಿಕಾರಿಗಳು ವಿಫಲಗೊಳಿಸಿದ್ದರು. ಈ ವಿಚಾರವಾಗಿ ಭಾರತಕ್ಕೆ ಅಮೆರಿಕ ಎಚ್ಚರಿಕೆಯನ್ನೂ ನೀಡಿತ್ತು ಎಂಬುದಾಗಿ ಕೆಲವು ಮೂಲಗಳನ್ನು ಉಲ್ಲೇಖಿಸಿ ಬ್ರಿಟನ್‌ನ ಫೈನಾನ್ಶಿಯಲ್‌ ಟೈಮ್ಸ್‌ ಪತ್ರಿಕೆ ಇತ್ತೀಚೆಗೆ ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.