ADVERTISEMENT

ರಾಷ್ಟ್ರಮಟ್ಟದಲ್ಲಿ ಮೋದಿ ವಿರುದ್ಧ ಹೋರಾಡಲು ಅವಕಾಶ ಕೊಡಿ: ಕೆಸಿಆರ್

ಪಕ್ಷದ ರ‍್ಯಾಲಿಯಲ್ಲಿ ಪ್ರಧಾನಿ ವಿರುದ್ಧ ಕಿಡಿಕಾರಿದ ತೆಲಂಗಾಣದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 14:12 IST
Last Updated 11 ಫೆಬ್ರುವರಿ 2022, 14:12 IST
ಕೆ. ಚಂದ್ರಶೇಖರ್ ರಾವ್
ಕೆ. ಚಂದ್ರಶೇಖರ್ ರಾವ್   

ಹೈದರಾಬಾದ್: ‘ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹೋರಾಡಲು ನನಗೆ ಅವಕಾಶ ಕೊಡಿ’ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್‌) ಅವರು ಶುಕ್ರವಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಹೈದರಾಬಾದ್‌ನಿಂದ 90 ಕಿ.ಮೀ. ದೂರದ ಜನಗಾಮ್‌ದಲ್ಲಿ ಪಕ್ಷದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ‘ಕೇಂದ್ರವು ತೆಲಂಗಾಣಕ್ಕೆ ರೈಲ್ವೆ ಕೋಚ್ ಫ್ಯಾಕ್ಟರಿಯಿಂದ ಹಿಡಿದು ವೈದ್ಯಕೀಯ ಕಾಲೇಜುಗಳು ಹಾಗೂ ನೀರಾವರಿ ಯೋಜನೆಗಳ ತನಕ ಹಲವು ಯೋಜನೆಗಳನ್ನು ನಿರಾಕರಿಸುತ್ತಿದೆ. ನಾವು ನಿಮ್ಮ (ಮೋದಿ) ವಿರುದ್ಧ ಬಂಡಾಯವೆದ್ದು ಹೋರಾಡುತ್ತೇವೆ. ನಾವು ದೆಹಲಿಯ ಕೋಟೆ ಗೋಡೆಗಳನ್ನು ಒಡೆಯುತ್ತೇವೆ’ ಎಂದು ಕಿಡಿಕಾರಿದರು.

‘ಮೊದಲು ನಿಮ್ಮನ್ನು (ಮೋದಿ) ಅಧಿಕಾರದಿಂದ ಕೆಳಗಿಳಿಸುವ ಮೂಲಕ ನಾವು ಎಲ್ಲ ಯೋಜನೆಗಳನ್ನು ರಾಜ್ಯಕ್ಕೆ ತರುತ್ತೇವೆ. ಎಚ್ಚರಿಕೆ, ಇದು ತೆಲಂಗಾಣ, ನಾವು ಹುಲಿ ಮರಿಗಳಂತೆ ಪ್ರತಿಕ್ರಿಯಿಸುತ್ತೇವೆ’ ಎಂದೂ ಕೆಸಿಆರ್ ಎಚ್ಚರಿಸಿದ್ದಾರೆ.

ADVERTISEMENT

‘ನಾವು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶಕ್ಕಾಗಿ ಪಾತ್ರ ವಹಿಸಲು ಸಿದ್ಧರಾಗಿರಬೇಕು. ಸಿದ್ದಿಪೇಟ್ (ಕೆಸಿಆರ್ ಅವರ ತವರು ಮತ್ತು ವಿಧಾನಸಭಾ ಕ್ಷೇತ್ರ) ಜನರು ನನಗೆ ತೆಲಂಗಾಣವನ್ನು ರೂಪಿಸಲು ಆಶೀರ್ವದಿಸಿದ್ದರು. ನೀವು ನೀಡಿದ ಒಪ್ಪಿಗೆ ಮತ್ತು ಧೈರ್ಯದಿಂದ ನಾನು ಮೋದಿ ಅವರನ್ನು ಎದುರಿಸಲು ದೆಹಲಿಗೆ ಹೋಗುತ್ತೇನೆ’ ಎಂದು ಅವರು ಹೇಳಿದ್ದಾರೆ.

ತೆಲಂಗಾಣ ರಾಷ್ಟ್ರಸಮಿತಿಯ ಮುಖ್ಯಸ್ಥರೂ ಆಗಿರುವ ಕೆಸಿಆರ್ ಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕಳೆದ ವಾರ ಪ್ರಧಾನಿ ಮೋದಿ ಅವರ ಹೈದರಾಬಾದ್ ಪ್ರವಾಸದ ವೇಳೆ ಶಿಷ್ಟಾಚಾರವನ್ನು ಉಲ್ಲಂಘಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಆಂಧ್ರಪ್ರದೇಶ ವಿಭಜನಾ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಲಾಗಿದೆ ಎಂದು ದೂರಿ ಅವರ ಪಕ್ಷದ ಸಂಸದರು ಗುರುವಾರ ಪ್ರಧಾನಿ ವಿರುದ್ಧ ವಿಶೇಷ ಹಕ್ಕು ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.