ADVERTISEMENT

ಮಹಾರಾಷ್ಟ್ರ | ಗಾಯಕ್ವಾಡ್‌ಗೆ ಮತದಾನ ಹಕ್ಕು ಅಧಿಕಾರದ ದುರ್ಬಳಕೆ: ರಾವುತ್

ಪಿಟಿಐ
Published 12 ಜುಲೈ 2024, 10:24 IST
Last Updated 12 ಜುಲೈ 2024, 10:24 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಗುಂಡಿನ ದಾಳಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನ‌ದಲ್ಲಿರುವ ಬಿಜೆಪಿ ಶಾಸಕ ಗಣಪತ್‌ ಗಾಯಕ್ವಾಡ್ ಅವರಿಗೆ ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡುವುದು ಅಧಿಕಾರದ ದುರ್ಬಳಕೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಆಗಿನ ಎನ್‌ಸಿಪಿ ಶಾಸಕರಾಗಿದ್ದ ಅನಿಲ್‌ ದೇಶಮುಖ್‌ ಮತ್ತು ನವಾಬ್‌ ಮಲ್ಲಿಕ್‌ ಅವರಿಗೆ ಮತದಾನ ಮಾಡಲು ಅವಕಾಶ ನೀಡಿರಲಿಲ್ಲ. ಆ ಸಂದರ್ಭದಲ್ಲಿ ಅವರಿಬ್ಬರೂ ಜೈಲಿನಲ್ಲಿದ್ದರು. ಆದರೆ, ಗಾಯಕ್ವಾಡ್‌ ಮತ ಹಾಕಲು ಜೈಲಿನಿಂದ ಹೊರಬರಬಹುದಾಗಿದೆ. ಇದು ಅಧಿಕಾರದ ಬಳಕೆಯೋ ಅಥವಾ ದುರ್ಬಳಕೆಯೋ’ ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳಿಗೆ ಜನ ಬೆಂಬಲವಿದೆ ಎಂಬುವುದನ್ನು ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶ ತೋರಿಸಿದೆ ಎಂದು ರಾವುತ್‌ ಹೇಳಿದ್ದಾರೆ.

ADVERTISEMENT

ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತರಾಗಿರುವ ಗಾಯಕ್ವಾಡ್‌ ಅವರಿಗೆ ಮತ ಹಾಕಲು ಅವಕಾಶ ನೀಡಬಾರದೆಂದು ಚುನಾವಣಾಧಿಕಾರಿಯನ್ನು ಕಾಂಗ್ರೆಸ್‌ ಒತ್ತಾಯಿಸಿದೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಥಾಣೆ ಜಿಲ್ಲೆಯ ಉಲ್ಲಾಸ್‌ ನಗರದ ಪೊಲೀಸ್‌ ಠಾಣೆಯಲ್ಲಿಯೇ ಶಿವಸೇನಾ (ಶಿಂದೆ ಬಣ) ನಾಯಕರಿಬ್ಬರಿಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಗಣಪತ್‌ ಗಾಯಕ್ವಾಡ್‌ ಅವರನ್ನು ಪೊಲೀಸರು ಫೆಬ್ರುವರಿಯಲ್ಲಿ ಬಂಧಿಸಿದ್ದರು. ಸದ್ಯ ಗಾಯಕ್ವಾಡ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಹಾರಾಷ್ಟ್ರ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯು ಇಂದು (ಶುಕ್ರವಾರ) ದಕ್ಷಿಣ ಮುಂಬೈನ ವಿಧಾನ ಭವನ ಸಂಕೀರ್ಣದಲ್ಲಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.