ಮುಂಬೈ: ಭಾರಿ ಭೂಕುಸಿತಕ್ಕೆ ತುತ್ತಾಗಿರುವ ಕೇರಳಕ್ಕೆ ತೆಲುಗು ನಟ ಅಲ್ಲು ಅರ್ಜುನ್ ಅವರು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (ಸಿಎಮ್‌ಡಿಆರ್‌ಎಫ್) ₹25 ಲಕ್ಷ (ದೇಣಿಗೆ) ನೀಡಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಲ್ಲು ಅರ್ಜುನ್, ಕೇರಳದ ಜನರು ನನಗೆ ತುಂಬಾ ಪ್ರೀತಿ ನೀಡುತ್ತಾರೆ. ಭಾರಿ ಭೂಕುಸಿತದಿಂದ ನಲುಗುತ್ತಿರುವ ವಯನಾಡನ್ನು ನೋಡಲು ನನ್ನ ಮನಸ್ಸಿಗೆ ಘಾಸಿಯಾಗಿದೆ. ಈ ಸಂಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗೆ ಕೈಜೋಡಿಸುತ್ತೇವೆ. ವಿನಾಶದ ಭೂಕುಸಿತದಿಂದ ಕಂಗೆಟ್ಟ ಕುಟುಂಬಗಳು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಅವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಶನಿವಾರ (ಆಗಸ್ಟ್4) ವಯನಾಡಿನ ಭೂಕುಸಿತ ಸಂಭವಿಸಿದ ಪ್ರದೇಶಗಳಿಗೆ ಲೆಫ್ಟಿನೆಂಟ್ ಕರ್ನಲ್ ಹಾಗೂ ನಟ ಮೋಹನ್‌ಲಾಲ್ ಸೇನಾ ಸಮವಸ್ತ್ರದಲ್ಲಿಯೇ ಭೇಟಿ ನೀಡಿದ್ದರು
ತಮ್ಮ ತಂದೆ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ವಿಶ್ವಶಾಂತಿ ಫೌಂಡೇಷನ್ ವತಿಯಿಂದ ಮುಂಡಕ್ಕೈ ಸರ್ಕಾರಿ ಶಾಲೆಯನ್ನು ಪುನರ್ನಿರ್ಮಾಣ ಮಾಡಲು ₹3 ಕೋಟಿ ನೀಡಲಾಗುವುದು ಎಂದು ಮೋಹನ್ ಲಾಲ್ ತಿಳಿಸಿದ್ದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಮಲ್ ಹಾಸನ್ ₹25 ಲಕ್ಷ , ಸೂರ್ಯ, ಜ್ಯೋತಿಕಾ ಮತ್ತು ಕಾರ್ತಿ ₹50 ಲಕ್ಷ, ಮಮ್ಮುಟ್ಟಿ ₹20 ಲಕ್ಷ, ದುಲ್ಕರ್ ಸಲ್ಮಾನ್ ₹15 ಲಕ್ಷ, ಫಹಾದ್ ಫಾಸಿಲ್ ಮತ್ತು ನಜ್ರಿಯಾ ₹25 ಮತ್ತು ಟೊವಿನೋ ಥಾಮಸ್ ₹25 ಲಕ್ಷ ನೀಡಿದ್ದಾರೆ ಎಂದು ವರದಿಯಾಗಿದೆ.
ಸರಣಿ ಭೂಕುಸಿತದಿಂದಾಗಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ, 300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.