ADVERTISEMENT

ಕಚ್ಚಾಟಕ್ಕೆ ಅಲೋಕ್‌ ತಲೆದಂಡ: ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾ

ಪಿಟಿಐ
Published 10 ಜನವರಿ 2019, 20:41 IST
Last Updated 10 ಜನವರಿ 2019, 20:41 IST
ಅಲೋಕ್‌ ವರ್ಮಾ
ಅಲೋಕ್‌ ವರ್ಮಾ   

ನವದೆಹಲಿ: ಸುಪ್ರೀಂ ಕೋರ್ಟ್‌ ಆದೇಶದ ಮೂಲಕ ಮಂಗಳವಾರವಷ್ಟೇ ಸಿಬಿಐ ನಿರ್ದೇಶಕ ಹುದ್ದೆಗೆ ಮರಳಿದ್ದ ಅಲೋಕ್‌ ವರ್ಮಾ ಅವರನ್ನು ಗುರುವಾರ ವಜಾಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯ ಸರಣಿ ಸಭೆಗಳ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಇದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಲೋಕಸಭೆಯ ಅತಿ ದೊಡ್ಡ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಪ್ರತಿನಿಧಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು ಆಯ್ಕೆ ಸಮಿತಿಯ ಸದಸ್ಯರು. ಅಲೋಕ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಬಹುಮತದ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಖರ್ಗೆ ಅವರು ಭಿನ್ನಮತ ದಾಖಲಿಸಿದ್ದಾರೆ.

ADVERTISEMENT

ವರ್ಮಾ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ನಡುವೆ ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ಕಚ್ಚಾಟ ನಡೆದಿತ್ತು. ಈ ಇಬ್ಬರೂ ಪರಸ್ಪರರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರ ಪರಿಣಾಮವಾಗಿ 2018ರ ಅಕ್ಟೋಬರ್‌ 23ರಂದು ಅಲೋಕ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳುಹಿಸಿತ್ತು.

ಸರ್ಕಾರದ ನಿರ್ಧಾರವನ್ನು ಅಲೋಕ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರವಷ್ಟೇ ರದ್ದು ಮಾಡಿತ್ತು. ಆದರೆ, ನೀತಿಗೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ನಿರ್ಬಂಧ ಹೇರಿತ್ತು. ಸಿಬಿಐ ನಿರ್ದೇಶಕ ಹುದ್ದೆಯಲ್ಲಿ ಅವರನ್ನು ಮುಂದುವರಿಸುವ ಸಂಬಂಧ ಆಯ್ಕೆ ಸಮಿತಿಯು ವಾರದೊಳಗಾಗಿ ನಿರ್ಧಾರ ಕೈಗೊಳ್ಳಬೇಕು ಎಂದುಸೂಚಿಸಿತ್ತು.

ಅಲೋಕ್‌ ಅವರನ್ನು ಅಗ್ನಿ ಶಾಮಕ ಸೇವೆಗಳು ಮತ್ತು ಗೃಹ ರಕ್ಷಕ ದಳದ ಮಹಾ ನಿರ್ದೇಶಕರಾಗಿ ನೇಮಿಸಲಾಗಿದೆ. ಅವರು ಇದೇ 31ರಂದು ನಿವೃತ್ತರಾಗಲಿದ್ದಾರೆ. ಹೆಚ್ಚುವರಿ ನಿರ್ದೇಶಕ ಎಂ. ನಾಗೇಶ್ವರ ರಾವ್‌ ಅವರನ್ನು ಸಿಬಿಐಯ ಪ್ರಭಾರ ನಿರ್ದೇಶಕರಾಗಿ ನೇಮಿಸಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಭಿನ್ನಮತ

ಅಲೋಕ್‌ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾ ಮಾಡುವುದಕ್ಕೆ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲೋಕ್‌ ಅವರಿಗೆ ತಮ್ಮ ವಾದ ಮಂಡಿಸಲು ಅವಕಾಶ ಕೊಡಬೇಕು ಎಂದು ಖರ್ಗೆ ವಾದಿಸಿದ್ದಾರೆ. ಆದರೆ, ಅಲೋಕ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ನಿರ್ಧಾರದಿಂದ ಪ್ರಧಾನಿ ಮತ್ತು ಸಿಕ್ರಿ ಅವರು ಹಿಂದೆ ಸರಿಯಲಿಲ್ಲ.

ಸತತ ಸಭೆ: ಆಯ್ಕೆ ಸಮಿತಿಯು ಬುಧವಾರ ಸಭೆ ಸೇರಿ ಸುಮಾರು 30 ನಿಮಿಷ ಚರ್ಚೆ ನಡೆಸಿತ್ತು. ಆ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಗುರುವಾರ ಸಂಜೆ 4.30ರ ಹೊತ್ತಿಗೆ ಪ್ರಧಾನಿ ನಿವಾಸದಲ್ಲಿ ಮತ್ತೆ ಸಭೆ ನಡೆಯಿತು. ಈ ಸಭೆ ಸುಮಾರು ಎರಡು ತಾಸು ನಡೆದಿದೆ.

ತನಿಖೆ ಭೀತಿ ಕಾರಣ: ಕಾಂಗ್ರೆಸ್‌

ಆಯ್ಕೆ ಸಮಿತಿಯ ನಿರ್ಧಾರವನ್ನು ಕಾಂಗ್ರೆಸ್‌ ಪಕ್ಷ ಖಂಡಿಸಿದೆ. ರಫೇಲ್‌ ಖರೀದಿ ಒಪ್ಪಂದದ ಬಗ್ಗೆ ಸಿಬಿಐ ಅಥವಾ ಜಂಟಿ ಸಂಸದೀಯ ಸಮಿತಿಯ ತನಿಖೆಯ ಬಗ್ಗೆ ಪ್ರಧಾನಿ ಭೀತರಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಆರೋಪಗಳೇನು?

ಅಲೋಕ್‌ ಅವರ ಮೇಲೆ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಆರೋಪ ಹೊರಿಸಲಾಗಿದೆ. ಕೇಂದ್ರ ಜಾಗೃತ ಆಯೋಗ(ಸಿವಿಸಿ) ಸಲ್ಲಿಸಿದ ವರದಿಯಲ್ಲಿ ಅಲೋಕ್‌ ವಿರುದ್ಧ ಎಂಟು ಆರೋಪ ಹೊರಿಸಲಾಗಿದೆ.ಕಳಂಕಿತ ಅಧಿಕಾರಿಗಳನ್ನು ಸಿಬಿಐಗೆ ಸೇರಿಸಲು ಯತ್ನ,ಮೊಯಿನ್‌ ಖುರೇಷಿ ಪ್ರಕರಣ ಮತ್ತು ಐಆರ್‌ಸಿಟಿಸಿ ಹಗರಣದ ತನಿಖೆಯಲ್ಲಿ ಅಕ್ರಮ ಈ ಆರೋಪಗಳಲ್ಲಿ ಸೇರಿವೆ.ಇಂತಹ ಆರೋಪಕ್ಕೆ ಒಳಗಾಗಿ ಸಿಬಿಐ ಮುಖ್ಯಸ್ಥ ಹುದ್ದೆಯಿಂದ ಹೊರ ಹೋಗುತ್ತಿರುವ ಮೊದಲ ಅಧಿಕಾರಿ ಅಲೋಕ್‌ ಅವರಾಗಿದ್ದಾರೆ.

‘ಸುಪ್ರೀಂ’ ರಕ್ಷಣೆ ನೆರವಾಗಲಿಲ್ಲ

ಸಿಬಿಐ ನಿರ್ದೇಶಕರಾದವರನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ ಕೆಲವು ನಿಯಮಗಳನ್ನು ರೂಪಿಸಿತ್ತು. ಸಿಬಿಐ ನಿರ್ದೇಶಕರಿಗೆ ಕನಿಷ್ಠ ಎರಡು ವರ್ಷಗಳ ಅವಧಿ ಇರಬೇಕು ಎಂದು ವಿನೀತ್‌ ನಾರಾಯಣ್‌ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಲೋಕಪಾಲ ಕಾಯ್ದೆಯಿಂದಾಗಿ ಸಿಬಿಐ ನಿರ್ದೇಶಕರ ಆಯ್ಕೆಯು ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಗೆ ಹೋಗಿದೆ. ಹಾಗಾಗಿ, ನಿರ್ದೇಶಕರನ್ನು ವಜಾ ಮಾಡುವ ನಿರ್ಧಾರವನ್ನು ಆಯ್ಕೆ ಸಮಿತಿ ಮಾತ್ರ ಕೈಗೊಳ್ಳಲು ಸಾಧ್ಯ. ಎರಡು ವರ್ಷಗಳ ಕನಿಷ್ಠ ಅವಧಿ ಇರಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಅಲೋಕ್‌ ಅವರ ನೆರವಿಗೆ ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.