ನವದೆಹಲಿ: ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕಾನೂನು ಹೋರಾಟದಲ್ಲಿ ಜಯಗಳಿಸಿದ ನಂತರ ಬುಧವಾರ ಕಚೇರಿಗೆ ಮರಳಿದರು.
ಅಲೋಕ್ ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಆಂತರಿಕ ಕಲಹ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಇಬ್ಬರೂ ಅಧಿಕಾರಿಗಳನ್ನು ಕೇಂದ್ರ ಸರ್ಕಾರ 2018ರ ಅಕ್ಟೋಬರ್ 23 ರಂದು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. 77 ದಿನಗಳ ನಂತರ ವರ್ಮಾ ಮರಳಿ ಕಚೇರಿಗೆ ಬಂದಿದ್ದಾರೆ.
ಕಡ್ಡಾಯ ರಜೆಯ ಮೇಲೆ ಹೋಗಲು ಕೇಂದ್ರ ಸರ್ಕಾರ ಹಾಗೂಕೇಂದ್ರ ಜಾಗೃತ ಆಯೋಗ (ಸಿವಿಸಿ) ಹೊರಡಿಸಿದ್ದ ಆದೇಶವನ್ನು ವರ್ಮಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಪಡಿಸಿತ್ತು.
ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವ್ಯಾಪಕ ಟೀಕೆ ನಡೆಸಿವೆ. ಆದರೆ, ಕೇಂದ್ರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಕೇಂದ್ರವು ಎಂ.ನಾಗೇಶ್ವರ ರಾವ್ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಿತ್ತು. ನಂತರ ಅವರಿಗೆ ಹೆಚ್ಚುವರಿ ನಿರ್ದೇಶಕರನ್ನಾಗಿ ಬಡ್ತಿ ನೀಡಲಾಗಿತ್ತು.
ಸಿವಿಸಿ ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೂ ವರ್ಮಾ ಯಾವುದೇ ಹೊಸ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ನಿರ್ಬಂಧ
ಹೇರಿದೆ.
ವರ್ಮಾ ವಿರುದ್ಧದ ಆರೋಪಗಳ ತನಿಖೆ ಮುಗಿದ ನಂತರ ಮುಂದಿನ ತೀರ್ಮಾನವನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯೇ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವರ್ಮಾ ಅವರ ಅಧಿಕಾರ ಅವಧಿ ಜನವರಿ 31ರಂದು ಕೊನೆಗೊಳ್ಳಲಿದೆ.
**
ಉನ್ನತಾಧಿಕಾರಿಗಳ ಕೈಯಲ್ಲಿ ವರ್ಮಾ ಭವಿಷ್ಯ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬುಧವಾರ ರಾತ್ರಿ ನಡೆಯಲಿರುವ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಭವಿಷ್ಯ ನಿರ್ಧಾರವಾಗಲಿದೆ.
ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯುವ ನಿರೀಕ್ಷೆ ಇದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜು ಖರ್ಗೆ ಅವರು ಪ್ರಧಾನಿ ನೇತೃತ್ವದ ಉನ್ನತಾಧಿಖಾರ ಸಮಿತಿಯ ಸದಸ್ಯರಾಗಿದ್ದಾರೆ.
ಸಿಕ್ರಿ ಸಿಜೆಐ ಪ್ರತಿನಿಧಿ
ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರನ್ನು ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಭಾಗವಹಿಸಲು ತಮ್ಮ ಪ್ರತಿನಿಧಿಯನ್ನಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇಮಕ ಮಾಡಿದ್ದಾರೆ.
ಪ್ರಧಾನಿ ನೇತೃತ್ವದ ಈ ಸಮಿತಿಗೆ ಮುಖ್ಯ ನ್ಯಾಯಮೂರ್ತಿಗಳು ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸದಸ್ಯರಾಗಿದ್ದಾರೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸುವ ಕೇಂದ್ರ ಸರ್ಕಾರ ಹಾಗೂ ಸಿವಿಸಿ ಆದೇಶವನ್ನು ಮುಖ್ಯ ನ್ಯಾಯಮುರ್ತಿ ಗೊಗೊಯಿ ನೇತೃತ್ವದ ಪೀಠವು ಮಂಗಳವಾರ ರದ್ದುಪಡಿಸಿತ್ತು.
ಆದ್ದರಿಂದ ಮುಖ್ಯ ನ್ಯಾಯಮೂರ್ತಿ ಗೊಗೊಯಿ ಸಮಿತಿಯಿಂದ ಹಿಂದೆ ಸರಿದಿದ್ದಾರೆ. ತಮ್ಮ ಬದಲು ನ್ಯಾಯಮೂರ್ತಿ ಸಿಕ್ರಿ ಅವರನ್ನು ಪ್ರತಿನಿಧಿಯನ್ನಾಗಿ ನಿಯೋಜಿಸಿದ್ದಾರೆ.
**
ಸಭೆಯಲ್ಲಿ ಭಾಗವಹಿಸಲ್ಲ: ಖರ್ಗೆ
ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಅಧಿಕಾರದಲ್ಲಿ ಮುಂದುವರಿಸುವ ಬಗ್ಗೆ ನಿರ್ಣಯಿಸಲು ಬುಧವಾರ ನಡೆಯುವ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಸಮಿತಿ ಸದಸ್ಯಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
‘ವರ್ಮಾ ಅವರ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನೋಡಿಲ್ಲ. ತೀರ್ಪು ಅಭ್ಯಸಿಸಲು ಕಾಲಾವಕಾಶ ಬೇಕು. ಆದ್ದರಿಂದ ಜನವರಿ 11 ರಂದು ಸಭೆ ನಡೆಸಬೇಕು’ ಎಂದು ಖರ್ಗೆ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.