ನವದೆಹಲಿ: ಫ್ಯಾಕ್ಟ್ ಚೆಕ್ ವೆಬ್‌ಸೈಟ್ ‘ಆಲ್ಟ್ ನ್ಯೂಸ್’ ಸ್ವೀಕರಿಸಿದ ದೇಣಿಗೆಗೆ ಸಂಬಂಧಿಸಿದಂತೆ ಹಣಕಾಸು ತಂತ್ರಜ್ಞಾನ ಸೇವಾ ಸಂಸ್ಥೆ, ರೇಜರ್‌ಪೇ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅಧಿಕಾರಿ ಹರ್ಷಿಲ್ ಮಾಥುರ್ ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪ ಹೊರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಥುರ್, ‘ಕೇವಲ ದೇಶೀಯ ಪಾವತಿಗಳನ್ನು ಸ್ವೀಕರಿಸಲಷ್ಟೇ ‘ಆಲ್ಟ್ ನ್ಯೂಸ್’ಗೆ ಅನುಮತಿಸಲಾಗಿತ್ತು. ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ–2010ರ ಅನುಮೋದನೆ ಇಲ್ಲದೇ ವಿದೇಶಿ ವಹಿವಾಟುಗಳಿಗೆ ಅವಕಾಶ ನೀಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಆಲ್ಟ್ ನ್ಯೂಸ್’ನ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ನಿರ್ದಿಷ್ಟ ತನಿಖೆಗಾಗಿ ನಿರ್ದಿಷ್ಟ ದತ್ತಾಂಶವನ್ನು ಮಾತ್ರ ತನಿಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಾಥುರ್ ತಿಳಿಸಿದ್ದಾರೆ.
ತನಗೆ ದೇಣಿಗೆ ನೀಡಿದವರ ಬಗೆಗಿನ ಮಾಹಿತಿಯನ್ನು ‘ರೇಜರ್‌ಪೇ’ ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ‘ಆಲ್ಟ್ ನ್ಯೂಸ್’ ಆರೋಪಿಸಿತ್ತು.
‘ದಾನಿಗಳ ಪ್ಯಾನ್, ವಿಳಾಸ, ಪಿನ್ ಕೋಡ್ ಇತ್ಯಾದಿಗಳನ್ನು ಹಂಚಿಕೊಂಡಿಲ್ಲ. ಇದು ತನಿಖೆಯ ವ್ಯಾಪ್ತಿಯಿಂದ ಹೊರಗಿನ ಅಂಶಗಳು ಎಂದು ನಾವು ನಂಬಿದ್ದೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.