ನವದೆಹಲಿ: ‘ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತ್ ಉಲ್ಲಾ ಖಾನ್ ‘ಅಕ್ರಮವಾಗಿ’ ಹಣ ಸಂಪಾದಿಸಿದಲ್ಲದೇ, ದೆಹಲಿಯಲ್ಲಿ ಸ್ಥಿರಾಸ್ತಿ ಖರೀದಿಗಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದರು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಆರೋಪಿಸಿದೆ.
‘ಶಾಸಕ ಖಾನ್ ತನಿಖೆಗೆ ಸಹಕಾರ ನೀಡುತ್ತಿಲ್ಲ ಹಾಗೂ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. 14 ಬಾರಿ ಸಮನ್ಸ್ ನೀಡಲಾಗಿದ್ದರೂ, ಒಂದು ಬಾರಿ ಮಾತ್ರ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ’ ಎಂದು ಇ.ಡಿ ಹೇಳಿದೆ.
ಅಮಾನತ್ ಉಲ್ಲಾ ಖಾನ್ 2016ರಿಂದ 2021ರ ವರೆಗೆ ದೆಹಲಿ ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಅವ್ಯವಹಾರ ನಡೆಸಿದ್ದರು ಎಂಬ ಆರೋಪಗಳ ಕುರಿತು ಸಿಬಿಐ ಮತ್ತು ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್‌ಗಳ ಆಧಾರದಲ್ಲಿ, ಅವರ ವಿರುದ್ಧ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಅವರ ನಿವಾಸದಲ್ಲಿ ಶೋಧದ ಬಳಿಕ, ಖಾನ್ ಅವರನ್ನು ಇ.ಡಿ ಸೋಮವಾರ ಬಂಧಿಸಿ, ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ನ್ಯಾಯಾಲಯ ಅವರನ್ನು ನಾಲ್ಕು ದಿನ ಇ.ಡಿ ಕಸ್ಟಡಿಗೆ ಒಪ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.