ಅಮೃತಸರ: ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಶಿರೋಮಣಿ ಅಕಾಲಿ ದಳದ ಸುಖಬೀರ್ ಸಿಂಗ್ ಬಾದಲ್ ಅವರು ಒಂದೇ ನಾಣ್ಯದ ಎರಡು ಮುಖಗಳು ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಯಾಪ್ಟನ್ ಅಮರಿಂದರ್ ಅಥವಾ ಸುಖಬೀರ್ ಸಿಂಗ್ ಬಾದಲ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ರಾಜ್ಯದ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.
‘ಪಂಜಾಬ್‌ನಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಸ್ಪಷ್ಟ ಯೋಜನೆಯೊಂದಿಗೆ ನಾನು ನಿಮ್ಮ ಮುಂದೆ ಇದ್ದಾನೆ. ಮತದಾರರೇ ಆಯ್ಕೆ ಮಾಡಬೇಕು’ ಎಂದಿದ್ದಾರೆ.
117 ಸ್ಥಾನಗಳ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಪೈಪೋಟಿ ಏರ್ಪಟ್ಟಿದೆ. ಇತ್ತ ಶಿರೋಮಣಿ ಅಕಾಲಿ ದಳವು ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ, ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸಿದೆ.
ಪಂಬಾಜ್‌ನಲ್ಲಿ ಫೆಬ್ರುವರಿ 20ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
'ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಪಂಜಾಬ್‌ನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ರಾಹುಲ್ ಗಾಂಧಿ ಅವರು ಇತ್ತೀಗಷ್ಟೇ ಘೋಷಣೆ ಮಾಡಿದ್ದರು.
ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ 'ಪಂಜಾಬ್ ಲೋಕ ಕಾಂಗ್ರೆಸ್' ಹಾಗೂ ಸುಖದೇವ್ ಸಿಂಗ್ ದಿಂಡ್ಸಾ ಅವರ ಶಿರೋಮಣಿ ಅಕಾಲಿ ದಳ (ಸಂಯುಕ್ತ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ.
ಕಾಂಗ್ರೆಸ್ ಜೊತೆಗಿನ ಭಿನ್ನಮತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಮರಿಂದರ್ ಸಿಂಗ್ ಪಕ್ಷವನ್ನು ತೊರೆದಿದ್ದರು. ಬಳಿಕ ಹೊಸತಾದ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ರೂಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.