ನವದೆಹಲಿ: ಪೋಬ್ಸ್ ನಿಯತಕಾಲಿಕೆ ಸಿದ್ಧಪಡಿಸಿರುವ 2024ರ ವಿಶ್ವದ ಮೊದಲ 10 ಜನ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಭಾರತದ ಉದ್ಯಮಿ ಮುಕೇಶ್ ಅಂಬಾನಿ ಸ್ಥಾನ ಪಡೆದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ, 66 ವರ್ಷದ ಅಂಬಾನಿ ಅವರ ಸಂಪತ್ತಿನ ಮೌಲ್ಯ ₹9.68 ಲಕ್ಷ ಕೋಟಿಯಷ್ಟಿದ್ದು, ಈ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಅವರ ಸಂಪತ್ತಿನ ಮೌಲ್ಯ ₹6.96 ಲಕ್ಷ ಕೋಟಿಯಷ್ಟಿತ್ತು ಎಂದು ಫೋಬ್ಸ್ ವರದಿಯಲ್ಲಿ ಹೇಳಲಾಗಿದೆ.
ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಗೌತಮ್ ಅದಾನಿ ಅವರು ಪೋಬ್ಸ್ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದ್ದಾರೆ. ಅವರ ಸಂಪತ್ತಿನ ಮೌಲ್ಯ ₹ 7 ಲಕ್ಷ ಕೋಟಿ ಇದೆ. ಕಳೆದ ವರ್ಷ ₹3.94 ಲಕ್ಷ ಕೋಟಿ ಇತ್ತು.
ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಲ್‌ವಿಎಂಎಚ್ ಕಂಪನಿಯ ಬರ್ನಾರ್ಡ್ ಅರ್ನಾಲ್ಟ್ ಅವರು ₹ 19 ಲಕ್ಷ ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ನಂತರದ ಸ್ಥಾನದಲ್ಲಿ, ಸಾಮಾಜಿಕ ಜಾಲತಾಣ ‘ಎಕ್ಸ್’ನ ಮಾಲೀಕ ಇಲಾನ್ ಮಸ್ಕ್ (₹16.27 ಲಕ್ಷ ಕೋಟಿ ಮೌಲ್ಯದ ಸಂಪತ್ತು), ಅಮೆಜಾನ್ ಮಾಲೀಕ ಜೆಫ್ ಬಿಜೋಸ್ (₹16.19 ಲಕ್ಷ ಕೋಟಿ ಮೌಲ್ಯದ ಸಂಪತ್ತು) ಹಾಗೂ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್(₹14.77 ಲಕ್ಷ ಕೋಟಿ) ಇದ್ದಾರೆ.
‘ಫೋಬ್ಸ್‌ನ 2024ರ ಶತಕೋಟ್ಯಧಿಪತಿಗಳ ಪಟ್ಟಿ’ಯಲ್ಲಿ ವಿಶ್ವದ 2,781 ಶ್ರೀಮಂತರು ಸ್ಥಾನ ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪಟ್ಟಿಯಲ್ಲಿ ಹೆಚ್ಚುವರಿಯಾಗಿ 141 ಮಂದಿ ಸ್ಥಾನಪಡೆದಿದ್ದಾರೆ.
ಅಮೆರಿಕದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ 813 ಇದ್ದರೆ, ಚೀನಾದಲ್ಲಿ 473 ಹಾಗೂ ಭಾರತದಲ್ಲಿ 200 ಇದೆ. ಕಳೆದ ವರ್ಷದ ಪಟ್ಟಿಗೆ ಹೋಲಿಸಿದಲ್ಲಿ, ಭಾರತದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ 31 ಜನರ ಹೆಚ್ಚಳವಾಗಿದೆ ಎಂದು ನಿಯತಕಾಲಿಕೆಯ ವರದಿಯಲ್ಲಿ ವಿವರಿಸಲಾಗಿದೆ.
ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯರ ಪೈಕಿ, ಐಟಿ ಕಂಪನಿ ಎಚ್‌ಸಿಎಲ್ ಸಹಸಂಸ್ಥಾಪಕ ಶಿವ ನಾಡಾರ್ 39ನೇ ಸ್ಥಾನದಲ್ಲಿದ್ದಾರೆ. ಇವರ ಸಂಪತ್ತಿನ ಮೌಲ್ಯ ₹ 3 ಲಕ್ಷ ಕೋಟಿ.
ಜಿಂದಾಲ್ ಸಮೂಹದ ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ–46ನೇ ಸ್ಥಾನ (₹2.79 ಲಕ್ಷ ಕೋಟಿ), ಸನ್ ಫಾರ್ಮಾದ ದಿಲೀಪ್ ಸಂಘವಿ–69ನೇ ಸ್ಥಾನ (₹2 ಲಕ್ಷ ಕೋಟಿ), ಸೈರಸ್ ಪೂನಾವಾಲಾ–90ನೇ ಸ್ಥಾನ (₹1.77 ಲಕ್ಷ ಕೋಟಿ) ಹಾಗೂ ₹1.74 ಲಕ್ಷ ಕೋಟಿ ಮೌಲ್ಯದ ಸಂಪತ್ತು ಹೊಂದಿರುವ ರಿಯಲ್ ಎಸ್ಟೇಟ್ ಉದ್ಯಮಿ ಕುಶಾಲ್ ಪಾಲ್ ಸಿಂಗ್ 92ನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.