ಮುಂಬೈ: ನಕಲಿ ಎನ್‌ಕೌಂಟರ್ ಮಾಡುವ ಉದ್ದೇಶದಿಂದ ಸದ್ಯ ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಯೋಜನೆ ರೂಪಿಸಿದ್ದರು ಎನ್ನುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ.
ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಸ್ಫೋಟಕಗಳಿದ್ದ ವಾಹನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ನಕಲಿ ಎನ್‌ಕೌಂಟರ್ ಮಾಡುವ ಯೋಜನೆ ರೂಪಿಸಲಾಗಿತ್ತು. ಈ ಇಬ್ಬರು ವ್ಯಕ್ತಿಗಳು ಸ್ಫೋಟಕಗಳನ್ನಿಟ್ಟಿದ್ದರು ಎನ್ನುವುದನ್ನು ಬಿಂಬಿಸಿ ಪ್ರಕರಣವನ್ನು ಇತ್ಯರ್ಥಗೊಳಿಸುವ ಉದ್ದೇಶವನ್ನು ’ಎನ್‌ಕೌಂಟರ್ ಸ್ಪೆಷಲಿಸ್ಟ್’ ವಾಜೆ ಹೊಂದಿದ್ದರು. ಈ ಮೂಲಕ ಪ್ರಶಂಸೆ ಪಡೆಯುವ ಬಯಕೆ ಇತ್ತು. ಆದರೆ, ಅವರ ಯೋಜನೆ ಕಾರ್ಯಗತವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಠಾಣೆಯಲ್ಲಿನ ವಾಜೆ ಅವರ ನಿವಾಸದ ಶೋಧ ಕಾರ್ಯ ನಡೆಸಿದಾಗ ವ್ಯಕ್ತಿಯೊಬ್ಬರ ಪಾಸ್‌ಪೋರ್ಟ್ ಅನ್ನು ಎನ್‌ಐಎ ವಶಪಡಿಸಿಕೊಂಡಿತ್ತು. ಆದರೆ, ಈ ವ್ಯಕ್ತಿಯ ಹೆಸರು ಬಹಿರಂಗಪಡಿಸಿಲ್ಲ.
ಪಾಸ್‌ಪೋರ್ಟ್ ಹೊಂದಿದ್ದ ವ್ಯಕ್ತಿ ಹಾಗೂ ಮತ್ತೊಬ್ಬನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ವಾಜೆ ಯೋಜನೆ ರೂಪಿಸಿದ್ದರು ಎನ್ನುವ ಶಂಕೆಯನ್ನು ಎನ್‌ಐಎ ವ್ಯಕ್ತಪಡಿಸಿದೆ.
ನಕಲಿ ಎನ್‌ಕೌಂಟರ್ ಅನ್ನು ಮಾರುತಿ ಇಕೊ ವಾಹನದಲ್ಲಿ ಮಾಡಲು ಯೋಚಿಸಲಾಗಿತ್ತು. ಈ ವಾಹನವನ್ನು ಮಹಾರಾಷ್ಟ್ರದ ಔರಾಂಗಾಬಾದ್ ನಗರದಿಂದ ಕಳೆದ ವರ್ಷ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿರುವ ಎನ್‌ಐಎ, ಎಲ್ಲ ದೃಷ್ಟಿಕೋನದಿಂದಲೂ ತನಿಖೆ ನಡೆಸುತ್ತಿದೆ.
ಮಾರ್ಚ್ 13ರಂದು ಸಚಿನ್ ವಾಜೆ ಅವರನ್ನು ಎನ್‌ಐಎ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.