ಮುಂಬೈ: ಭಾರತೀಯ ಗಗನಯಾತ್ರಿಯನ್ನು ಈ ವರ್ಷಾಂತ್ಯದೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
ಅಮೆರಿಕದ 248ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗಾರ್ಸೆಟ್ಟಿ, 'ನಾವು ಈ ವರ್ಷಾಂತ್ಯದಲ್ಲಿ ಭಾರತೀಯ ಗಗನಯಾತ್ರಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು 2023ರಲ್ಲಿ ಅಮೆರಿಕಕ್ಕೆ ಬಂದಿದ್ದಾಗ, ಈ ಬಗ್ಗೆ ಭರವಸೆ ನೀಡಿದ್ದೇವೆ. ಯೋಜನೆಯು ಪ್ರಗತಿಯಲ್ಲಿದ್ದು, ಇದೇ ವರ್ಷ ಕೈಗೂಡಲಿದೆ' ಎಂದಿದ್ದಾರೆ.
ಭಾರತದ 'ಇಸ್ರೊ' ಹಾಗೂ ಅಮೆರಿಕದ 'ನಾಸಾ' ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಭೂ ವೀಕ್ಷಣಾ ಉಪಗ್ರಹ 'ನಿಸಾರ್' ಈ ವರ್ಷಾಂತ್ಯದಲ್ಲಿ ಉಡಾವಣೆಗೊಳ್ಳುವ ಸಾಧ್ಯತೆ ಇದೆ ಎಂದೂ ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ಸಂಶೋಧನೆ ಮತ್ತು ನಿರ್ಣಾಯಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಮನ್ವಯ ಸಾಧಿಸುವುದರತ್ತ ಗಮನಹರಿಸಬೇಕು. ಪರಸ್ಪರ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದರಿಂದ ಸಾಧ್ಯ ಎಂದು ಸಲಹೆ ನೀಡಿದ್ದಾರೆ.
'ಭಾರತವು ಈವರೆಗೆ ಹೊಂದಿರದ ಕೆಲವು ಸಾಮರ್ಥ್ಯಗಳು ಅಮೆರಿಕದ ಬಳಿ ಇವೆ. ಉಭಯ ದೇಶಗಳು ಸಮನ್ವಯ ಸಾಧಿಸಿದರೆ, ಅಂತಹ ಸಾಮರ್ಥ್ಯಗಳನ್ನು ಎರಡೂ ದೇಶಗಳು ಹೊಂದಲು ಸಾಧ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.