ADVERTISEMENT

ಗುಂಡಿಕ್ಕಿ ನಾಲ್ವರು ದಲಿತರ ಹತ್ಯೆ:ರಾಹುಲ್‌ ಜೊತೆ ನೋವು ತೋಡಿಕೊಂಡ ಕುಟುಂಬದ ಹಿರಿಯ

ಪಿಟಿಐ
Published 4 ಅಕ್ಟೋಬರ್ 2024, 10:08 IST
Last Updated 4 ಅಕ್ಟೋಬರ್ 2024, 10:08 IST
   

ರಾಯ್ ಬರೇಲಿ: ಉತ್ತರ ಪ್ರದೇಶದ ಅಮೇಠಿ ಬಳಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಗ, ಸೊಸೆ ಮತ್ತು ಇಬ್ಬರು ಪುತ್ರಿಯರನ್ನು ಕಳೆದುಕೊಂಡ ದಲಿತ ವ್ಯಕ್ತಿಯೊಬ್ಬರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಗುರುವಾರ ಸಂಜೆ ಅವರಿದ್ದ ಬಾಡಿಗೆ ಮನೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, 60 ವರ್ಷದ ರಾಮಗೋಪಾಲ್ ತಮ್ಮ ಕುಟುಂಬ ಸದಸ್ಯರ ಮೃತದೇಹಗಳ ಜೊತೆ ರಾಯ್ ಬರೇಲಿಯ ಉಂಚಾಹರ್ ಪ್ರದೇಶದ ಸುದಾಮಪುರಿ ತಮ್ಮ ಹಳ್ಳಿಗೆ ಬಂದಿದ್ದಾರೆ.

ಹಳ್ಳಿಗೆ ಭೇಟಿ ನೀಡಿದ ಗಾಂಧಿ ಕುಟುಂಬದ ಆಪ್ತ, ಸಂಸದ ಕಿಶೋರಿ ಲಾಲ್ ಶರ್ಮಾ, ದೂರವಾಣಿ ಮೂಲಕ ರಾಹುಲ್ ಗಾಂಧಿ ಜೊತೆ ಮಾತನಾಡಿಸಿದ್ದಾರೆ. 3 ನಿಮಿಷಗಳ ಕಾಲ ರಾಮಗೋಪಾಲ್, ರಾಹುಲ್ ಜೊತೆ ಮಾತನಾಡಿ, ತಮ್ಮ ನೋವು ತೋಡಿಕೊಂಡಿರುವ ದೃಶ್ಯ ವಿಡಿಯೊದಲ್ಲಿದೆ.

ADVERTISEMENT

ರಾಮಗೋಪಾಲ್ ಮಗ, ಶಿಕ್ಷಕ ಸುನೀಲ್ ಕುಮಾರ್(35), ಸೊಸೆ ಪೂನಂ(32), ಹೆಣ್ಣುಮಕ್ಕಳಾದ ದೃಷ್ಟಿ ಮತ್ತು ಸುನಿಯನ್ನು ಅಮೇಠಿಯ ಅಹೊರ್ವಾ ಭವಾನಿ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

‘ನನ್ನ ಮಗನನ್ನು ಕೊಂದ ರೀತಿಯೇ ಹಂತಕರೂ ಸಾಯಬೇಕು’ಎಂದು ರಾಮಗೋಪಾಲ್ ಹೇಳಿದ್ದಾರೆ.

‘ಈ ಬಗ್ಗೆ ಅಮೇಠಿ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದು, ಎಲ್ಲ ಕೋನಗಳಿಂದಲೂ ತನಿಖೆಗೆ ಸೂಚಿಸಿದ್ದೇನೆ. ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕ ಸತ್ಯ ಹೊರಬೀಳಲಿದೆ’ಎಂದು ಶರ್ಮಾ ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯುತ್ತಮವಾಗಿದೆ ಎಂದು ಸರ್ಕಾರ ಬೆನ್ನುತಟ್ಟಿಕೊಳ್ಳುತ್ತದೆ. ಹಾಗಿದ್ದರೆ, ಇಂತಹ ಘಟನೆಗಳು ಏಕೆ ನಡೆಯುತ್ತಿವೆ? ಎಂದು ಅವರು ಪ್ರಶ್ನಿಸಿದ್ದಾರೆ.

‘ಘಟನೆ ನನ್ನ ಕ್ಷೇತ್ರದಲ್ಲಿ ನಡೆದಿದ್ದು, ಮೃತರು ರಾಹುಲ್ ಗಾಂಧಿ ಅವರ ಕ್ಷೇತ್ರದವರಾಗಿದ್ದಾರೆ. ದೂರವಾಣಿ ಮೂಲಕ ಅವರ ಜೊತೆ ಮಾತನಾಡಿಸಿದ್ದು, ಘಟನೆ ಬಗ್ಗೆ ಮಾಹಿತಿ ನೀಡಿದ್ದೇನೆ. ಎರಡೂ ಕ್ಷೇತ್ರಗಳು ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದು, ಗ್ರಾಮಕ್ಕೆ ತೆರಳಿ ಸಂತ್ರಸ್ತರ ನೋವು ಆಲಿಸುವಂತೆ ರಾಹುಲ್ ನನಗೆ ತಿಳಿಸಿದರು’ಎಂದು ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.