ನವದೆಹಲಿ: ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸದಸ್ಯರಲ್ಲದವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಈ ಬಾರಿ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್ ಉಮೇದುವಾರನನ್ನಾಗಿ ಮಾಡಿದೆ.
1967ರಲ್ಲಿ ಈ ಕ್ಷೇತ್ರ ರಚನೆಯಾಯಿತು. ಗಾಂಧಿ ಕುಟುಂಬದ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಈ ಕ್ಷೇತ್ರದಿಂದ ಸಂಸದರಾಗಿದ್ದರು.
1967, 1971ರಲ್ಲಿ ಕಾಂಗ್ರೆಸ್ ವಿದ್ಯಧರ ಭಾಜ್‌ಪೈ ಸಂಸದರಾಗಿದ್ದರು. 1977ರಲ್ಲಿ ಜನತಾ ಪಕ್ಷದ ರವೀಂದ್ರ ಪ್ರತಾಪ್ ಸಿಂಗ್ ಅವರು ಸಂಜಯ್ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1980ರ ಸಾರ್ವತ್ರಿ ಚುನಾವಣೆಯಲ್ಲಿ ಸಂಜಯ್ ಗಾಂಧಿ ಅವರು ರವೀಂದ್ರ ಪ್ರತಾಪ್ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು.
ಸಂಜಯ್ ಗಾಂಧಿ ಅವರ ಅಕಾಲಿಕ ಮರಣದ ನಂತರ 1981ರಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜೀವ್ ಗಾಂಧಿ ಸ್ಪರ್ಧಿಸಿ 2 ಲಕ್ಷ ಮತಗಳ ಅಂತರಿಂದ ಗೆಲುವು ಸಾಧಿಸಿದ್ದರು. 1991ರಲ್ಲಿ ಎಲ್‌ಟಿಟಿಇ ಉಗ್ರರ ಗುಂಡಿಗೆ ಬಲಿಯಾಗುವವರೆಗೂ ಅವರು ಈ ಕ್ಷೇತ್ರದ ಸಂಸದರಾಗಿದ್ದರು.
ಬಳಿಕ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅಪ್ತ ಸತೀಶ್ ಶರ್ಮಾ ಇಲ್ಲಿಂದ ಸಂಸದರಾಗಿದ್ದರು. 1996ರಲ್ಲೂ ಗೆದ್ದರು. 1998ರಲ್ಲಿ ಬಿಜೆಪಿಯ ಸಂಜಯ್ ಸಿನ್ಹಾ ವಿರುದ್ಧ ಸೋತಿದ್ದರು.
1999ರಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2004ರಲ್ಲಿ ಅಮೇಠಿ ಬಿಟ್ಟು ಪಕ್ಕದ ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿದರು. 2004ರಿಂದ 2019ರವರೆಗೆ ರಾಹುಲ್ ಗಾಂಧಿ ಈ ಕ್ಷೇತ್ರದ ಸಂಸದರಾಗಿದ್ದರು. 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.