ನೈನಿತಾಲ್: ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಸೋಮವಾರ ಸಂಜೆ ಗುಂಪೊಂದು ಹಾನಿಯುಂಟು ಮಾಡಿದೆ.
ಗುಂಪೊಂದು ಮನೆ ಕಿಟಿಕಿ ಗಾಜುಗಳನ್ನು ಒಡೆದು, ಮನೆಯ ಬಾಗಿಲಿಗೆ ಬೆಂಕಿ ಹಚ್ಚಿದೆ.
ಸಲ್ಮಾನ್ ಖುರ್ಷಿದ್ ಅವರು ತಮ್ಮ ಇತ್ತೀಚಿನ ಪುಸ್ತಕದಲ್ಲಿ ಹಿಂದುತ್ವ ಮತ್ತು ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳ ನಡುವೆ ಹೋಲಿಕೆ ಮಾಡುವ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
‘ಬೋವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖುರ್ಷಿದ್ ಮನೆಯ ಕಿಟಕಿಯ ಗಾಜುಗಳನ್ನು ಕೆಲವರು ಹಾನಿಗೊಳಿಸಿದ್ದಾರೆ ಮತ್ತು ಬಾಗಿಲಿಗೆ ಬೆಂಕಿ ಹಚ್ಚಿದ್ದಾರೆ,’ ಎಂದು ನೈನಿತಾಲ್ (ನಗರ) ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಚಂದ್ರ ಹೇಳಿದ್ದಾರೆ.
ಮನೆಯಲ್ಲಿ ಖುರ್ಷಿದ್ ಕುಟುಂಬಸ್ಥರು ಯಾರೂ ಇರಲಿಲ್ಲ. ಮನೆಯನ್ನು ನೋಡಿಕೊಳ್ಳುವವರು ಇದ್ದರಾದರೂ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.
ಘಟನೆ ನಂತರ ಖುರ್ಷಿದ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ಅವರ ಪ್ರತಿಕೃತಿಯನ್ನು ಸುಡುತ್ತಿರುವುದು, ಅವರು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೊದಲ್ಲಿದೆ.
‘ದೇಶದ್ರೋಹಿಗಳನ್ನು ಹೊಡೆದುರುಳಿಸಬೇಕು’, ‘ದೇಶ ಮುಲ್ಲಾಗಳದ್ದಲ್ಲ, ವೀರ ಶಿವಾಜಿಯದ್ದು’, ‘ಜೈ ಜೈ ವೀರ್ ಬಜರಂಗಿ’ ‘ಜೈ, ಜೈ ಶ್ರೀ ರಾಮ್’ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಆ ವಿಡಿಯೊದಲ್ಲಿದೆ.
ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರ ‘ಸನ್‌ರೈಸ್ ಓವರ್ ಅಯೋಧ್ಯ: ನ್ಯಾಶನಲಿಸಂ ಇನ್ ಅವರ್ ಟೈಮ್ಸ್’ ಎಂಬ ಪುಸ್ತಕ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಪುಸ್ತಕದ ಕೆಲ ಅಂಶಗಳು ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳಿಂದ ಹೆಚ್ಚು ಟೀಕೆಗೆ ಗುರಿಯಾಗಿದೆ.
ಸುಟ್ಟ ಕಲೆಗಳ ತಮ್ಮ ಮನೆಯ ಬಾಗಿಲಿನ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಖುರ್ಷಿದ್, ‘ ಈ ಬಾಗಿಲನ್ನು ನನ್ನ ಸ್ನೇಹಿತರಿಗಾಗಿ ತೆರೆಯಲು ಆಶಿಸಿದ್ದೇನೆ. ಇದು ಹಿಂದೂವಾದ ಎಂದು ಕರೆಯುವಲ್ಲಿ ಇನ್ನೂ ನನ್ನ ತಪ್ಪಿದೆಯೇ?’ ಎಂದು ಘಟನೆಯ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ದಾಳಿಯನ್ನು ‘ಅವಮಾನಕರ’ ಎಂದು ಕರೆದಿದ್ದಾರೆ.
ಹಿಂದುತ್ವವನ್ನು ಭಯೋತ್ಪಾದಕ ಗುಂಪುಗಳೊಂದಿಗೆ ಹೋಲಿಸಿದ್ದಕ್ಕಾಗಿ ಖುರ್ಷಿದ್ ಅವರು ಬಿಜೆಪಿಗರಲ್ಲದೇ ಕಾಂಗ್ರೆಸ್ ನಾಯಕರಿಂದಲೂ ಟೀಕೆಗೆ ಗುರಿಯಾಗಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರಿಂದಲೂ ಖುರ್ಷಿದ್ ಟೀಕೆಗಳನ್ನು ಎದುರಿಸಿದ್ದಾರೆ.
"ಖುರ್ಷಿದ್ ಹೋಲಿಕೆಯು ಅವಾಸ್ತವಿಕ ಮತ್ತು ಉತ್ಪ್ರೇಕ್ಷೆ’ ಎಂದು ಆಜಾದ್ ಹೇಳಿದ್ದರು.
ಆದರೆ, ನವೆಂಬರ್ 12 ರಂದು ವಾರ್ಧಾದಲ್ಲಿ ಪಕ್ಷದ ಕಾರ್ಯಕರ್ತರ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ’ಹಿಂದೂ ಧರ್ಮ ಮತ್ತು ಹಿಂದುತ್ವ ಬೇರೆ ಬೇರೆ’ ಎಂದು ಹೇಳಿದ್ದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.