ನವದೆಹಲಿ (ಪಿಟಿಐ): ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದ ಕಠಿಣ ಕಾನೂನನ್ನು ಕೇಂದ್ರ ಸರ್ಕಾರವು ಶುಕ್ರವಾರದಿಂದ ಜಾರಿಗೆ ತಂದಿದೆ. ತಪ್ಪು ಮಾಡಿರುವುದು ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ₹1 ಕೋಟಿವರೆಗೆ ದಂಡ ವಿಧಿಸಲು ಈ ಕಾನೂನು ಅವಕಾಶ ಕಲ್ಪಿಸುತ್ತದೆ.
‘ಸರ್ಕಾರಿ ಪರೀಕ್ಷೆಗಳ (ಅಕ್ರಮಗಳ ತಡೆ) ಕಾಯ್ದೆ – 2024’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿ ಸರಿಸುಮಾರು ನಾಲ್ಕು ತಿಂಗಳು ಕಳೆದ ನಂತರ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಕಾಯ್ದೆಯು ಜೂನ್ 21ರಿಂದ ಜಾರಿಗೆ ಬಂದಿದೆ ಎಂದು ಅಧಿಸೂಚನೆ ಹೇಳಿದೆ.
ಯುಜಿಸಿ–ನೆಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಈ ಸಂದರ್ಭದಲ್ಲಿ ಕಾಯ್ದೆಯು ಜಾರಿಗೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದರ ಬಗ್ಗೆ ತನಿಖೆ ಆರಂಭಿಸಿರುವ ಸಿಬಿಐ ಅಧಿಕಾರಿಗಳು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ನೀಟ್–ಯುಜಿ ಪರೀಕ್ಷೆಯಲ್ಲಿ ಕೂಡ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
‘ಸರ್ಕಾರಿ ಪರೀಕ್ಷೆಗಳ (ಅಕ್ರಮಗಳ ತಡೆ) ಮಸೂದೆ – 2024’ಕ್ಕೆ ರಾಜ್ಯಸಭೆಯು ಫೆಬ್ರುವರಿ 9ರಂದು ಅಂಗೀಕಾರ ನೀಡಿತ್ತು. ಲೋಕಸಭೆಯು ಇದಕ್ಕೆ ಫೆಬ್ರುವರಿ 6ರಂದು ಒಪ್ಪಿಗೆ ನೀಡಿತ್ತು. ರಾಷ್ಟ್ರಪತಿಯವರು ಈ ಮಸೂದೆಗೆ ಫೆಬ್ರುವರಿ 12ರಂದು ಅಂಕಿತ ಹಾಕಿದ್ದರು.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೆ, ಬ್ಯಾಂಕಿಂಗ್ ನೇಮಕಾತಿಗೆ ನಡೆಸುವ ಪರೀಕ್ಷೆಗಳು ಹಾಗೂ ಎನ್‌ಟಿಎ ನಡೆಸುವ ಪರೀಕ್ಷೆಗಳು ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುವುದನ್ನು ತಡೆಯುವ ಉದ್ದೇಶವನ್ನು ಕಾಯ್ದೆಯು ಹೊಂದಿದೆ.
ತಪ್ಪು ಮಾಡಿರುವುದು ಸಾಬೀತಾದರೆ ಈ ಕಾಯ್ದೆಯ ಅಡಿಯಲ್ಲಿ ಕನಿಷ್ಠ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಸಾಧ್ಯವಿದೆ. ವಂಚನೆಯಂತಹ ಅಪರಾಧವನ್ನು ಸಂಘಟಿತವಾಗಿ ಎಸಗಿದವರಿಗೆ ಐದರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಹಾಗೂ ಕನಿಷ್ಠ ₹1 ಕೋಟಿ ದಂಡ ವಿಧಿಸಲು ಅವಕಾಶ ಇದೆ.
ಈ ಕಾಯ್ದೆಯು ಜಾರಿಗೆ ಬರುವ ಮೊದಲು, ಸರ್ಕಾರ ಅಥವಾ ಸರ್ಕಾರದ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ಎಸಗುವವರಿಗೆ ಶಿಕ್ಷೆ ವಿಧಿಸಲು ನಿರ್ದಿಷ್ಟವಾದ ಕಾನೂನು ಇರಲಿಲ್ಲ.
ಹಾನಿ ನಿಯಂತ್ರಣದ ಯತ್ನ: ಕಾಂಗ್ರೆಸ್
ನವದೆಹಲಿ (ಪಿಟಿಐ): ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಕ್ರಮವು ಆಗಿರುವ ಹಾನಿಯ ನಿಯಂತ್ರಣಕ್ಕೆ ಯತ್ನಿಸುವಂತೆ ಇದೆ ಎಂದು ಕಾಂಗ್ರೆಸ್ ಟೀಕಿಸಿದೆ. ಕಾನೂನನ್ನು ಜಾರಿಗೆ ತರುವ ಅಗತ್ಯ ಇತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಕೆಲವು ಅಕ್ರಮಗಳು ನಡೆದ ನಂತರದಲ್ಲಿ ಇದು ಜಾರಿಗೆ ಬಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್‘ ಮೂಲಕ ಹೇಳಿದ್ದಾರೆ. ರಾಷ್ಟ್ರಪತಿಯವರು ಈ ಮಸೂದೆಗೆ ಫೆಬ್ರುವರಿ 13ರಂದು ಅಂಕಿತ ಹಾಕಿದ್ದಾರೆ. ಆದರೆ ಕಾಯ್ದೆಯು ಶುಕ್ರವಾರದಿಂದ ಜಾರಿಗೆ ಬಂದಿದೆ ಎಂಬುದನ್ನು ದೇಶಕ್ಕೆ ಈ ದಿನ (ಶನಿವಾರ) ಬೆಳಿಗ್ಗೆ ತಿಳಿಸಲಾಗಿದೆ ಎಂದು ರಮೇಶ್ ಅವರು ಹೇಳಿದ್ದಾರೆ. ನೀಟ್ ಯುಜಿಸಿ–ನೆಟ್ ಸಿಎಸ್‌ಐಆರ್–ಯುಜಿಸಿ–ನೆಟ್ ಮತ್ತು ಇತರ ಹಗರಣಗಳಿಂದ ಆಗಿರುವ ಹಾನಿಯನ್ನು ಕಡಿಮೆ ಮಾಡುವ ಒಂದು ಯತ್ನ ಇದು ಎಂಬುದು ಸ್ಪಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಪ್ರಶ್ನೆಪತ್ರಿಕೆ ಸೋರಿಕೆ ಆಗದೆ ಇರುವಂತೆ ನೋಡಿಕೊಳ್ಳುವ ಕಾನೂನುಗಳು ವ್ಯವಸ್ಥೆಗಳು ಪ್ರಕ್ರಿಯೆಗಳನ್ನು ರೂಪಿಸುವುದು ಹೆಚ್ಚು ಮುಖ್ಯ’ ಎಂದು ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.