ನಾಗ್ಪುರ: ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯ ನಡುವೆಯೇ ನಾಗ್ಪುರದಲ್ಲಿ ₹14.5 ಕೋಟಿ ಮೌಲ್ಯದ ಚಿನ್ನವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್ ಮೂಲದ ಸಿಕ್ವೆಲ್ ಲಾಜಿಸ್ಟಿಕ್ಸ್ ಸಂಸ್ಥೆ ಆಭರಣಗಳು ಮತ್ತು ಚಿನ್ನದ ಬಿಸ್ಕತ್ತುಗಳನ್ನು ಸಾಗಿಸುತ್ತಿದ್ದ ವೇಳೆ ಕಣ್ಗಾವಲು ತಂಡ ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ವಿಮಾನದ ಮೂಲಕ ನಾಗ್ಪುರಕ್ಕೆ ಸರಕು ಬಂದಿದ್ದು, ಅದನ್ನು ಅಮರಾವತಿಗೆ ಕಳುಹಿಸಲಾಗುತ್ತಿತ್ತು. ಈ ವೇಳೆ ಅಂಬಾಝರಿ ಸರೋವರದಿಂದ ವಾಡಿಗೆ ತೆರಳುತ್ತಿದ್ದ ವಾಹನವನ್ನು ತಡೆದು ಚಿನ್ನವನ್ನು ವಶಪಡಿಸಿಕೊಂಡಿರುವ ಪೊಲೀಸರು ಅಂಬಾಝರಿ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಚುನಾವಣಾ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ಸಾಗಿಸಲು ಸಿಕ್ವೆಲ್ ಲಾಜಿಸ್ಟಿಕ್ಸ್ ಸಂಸ್ಥೆಯು ಚುನಾವಣಾ ಆಯೋಗದಿಂದ ಅಗತ್ಯ ಅನುಮತಿ ಪಡೆದುಕೊಂಡಿಲ್ಲ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 15ರಿಂದ ಮಹಾರಾಷ್ಟ್ರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. 23ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.