ದೆಹಲಿ: ವಕೀಲರಿಂದ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ದೆಹಲಿ ಪೊಲೀಸ್ ಪ್ರಧಾನ ಕಚೇರಿ ಮುಂದೆ ಸಾವಿರ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ದೇಶದ ರಾಜಧಾನಿಯಲ್ಲಿ ಪೊಲೀಸರ ಪ್ರತಿಭಟನೆ ತೀವ್ರಗೊಂಡಿದ್ದು ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೌನ ವಹಿಸಿರುವುದು ಯಾಕೆ ಎಂದು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರಶ್ನಿಸಿದೆ.
ಏತನ್ಮಧ್ಯೆ, ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಎಎಪಿ ವಿರುದ್ಧ ವಾಗ್ದಾಳಿ ನಡೆಸುವುದನ್ನು ಕಡಿಮೆ ಮಾಡಿದ್ದುದೆಹಲಿ ಪೊಲೀಸರು ಬಿಜೆಪಿಯ ಸಶಸ್ತ್ರ ಪಡೆಯಂತೆ ವರ್ತಿಸುತ್ತಿದ್ದಾರೆ ಎಂದು ಎಎಪಿ ಟೀಕಿಸಿದೆ.
ದೆಹಲಿ ಪೊಲೀಸರು ದೇಶದ ರಾಜಧಾನಿಯ ರಸ್ತೆಯಲ್ಲಿ ಪ್ರತಿಭಟಿಸುವ ಮೂಲಕ ಕೆಳಸ್ತರಕ್ಕಿಳಿದಿದ್ದಾರೆ. ಇದೇನಾ ಬಿಜೆಪಿ ಹೇಳಿದ ಹೊಸ ಭಾರತ?. ದೆಹಲಿ ಪೊಲೀಸರ ಮೇಲ್ವಿಚಾರಕರಾಗಿರುವುದು ಗೃಹ ಸಚಿವಾಲಯ. 72 ವರ್ಷಗಳಲ್ಲಿ ಇದೇ ಮೊದಲ ಬಾರಿ ದೆಹಲಿಯಲ್ಲಿ ಪೊಲೀಸರು ಪ್ರತಿಭಟನೆಗಿಳಿದಿದ್ದಾರೆ. ಬಿಜೆಪಿ ನಮ್ಮ ದೇಶವನ್ನು ಎಲ್ಲಿಗೆ ಕರೆದೊಯ್ದಿದೆ? ದೇಶದ ಗೃಹ ಸಚಿವ ಅಮಿತ್ ಶಾ ಈಗ ಎಲ್ಲಿದ್ದಾರೆ? ದೇಶದ ರಾಜಧಾನಿಯಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆ ನಿಭಾಯಿಸಲಿ ಎಂಬುದನ್ನು ಅವರು ನಮಗೆ ತಿಳಿಸಿಕೊಡಲಿ. ಎಲ್ಲ ವಿಷಯವನ್ನು ಕಾನೂನು ರೀತಿಯಲ್ಲಿಯೇ ಪರಿಹರಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ದೆಹಲಿ ಪೊಲೀಸರನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ಎಎಪಿ, ಬಿಜೆಪಿ ವಿರುದ್ಧಕಿಡಿಕಾರಿದೆ. ಬಿಜೆಪಿಯು ದೆಹಲಿ ಪೊಲೀಸರನ್ನು ಉತ್ತೇಜಿಸುತ್ತಿದ್ದು, ನಾವು ಪೊಲೀಸ್ ರಾಜ್ಯದಲ್ಲಿ ಇರುವಂತೆ ಭಾಸವಾಗುತ್ತಿದೆಎಂದಿದೆ.
ದೆಹಲಿಯ ನಿಯಮ ಮತ್ತು ಕಾನೂನು ವ್ಯವಸ್ಥೆ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಪೊಲೀಸ್ ಅಧಿಕಾರಿಗಳು ಸೊಕ್ಕು ಇರುವವರು. ದೆಹಲಿ ಪೊಲೀಸರು ರಾಜಕೀಯ ವಸ್ತುವಾಗಿ ಮಾರ್ಪಟ್ಟಿದ್ದು, ಬಿಜೆಪಿಯ ಸಶಸ್ತ್ರ ಪಡೆಯಂತೆ ವರ್ತಿಸುತ್ತಿದ್ದಾರೆ. ರಾಜಧಾನಿಯಲ್ಲಿನ ಕೆಟ್ಟ ಪರಿಸ್ಥಿತಿ ನೋಡಿದರೆ ಗೃಹ ಸಚಿವರ ಅದಕ್ಷತೆ ಎದ್ದು ಕಾಣುತ್ತದೆ. ದೆಹಲಿಯಲ್ಲಿ ಕಾನೂನು ವ್ಯವಸ್ಥೆ ಕಾಪಾಡಲು ಅಮಿತ್ ಶಾ ಸಂಪೂರ್ಣ ಸೋತಿದ್ದಾರೆ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿ ಕಾನೂನು ವ್ಯವಸ್ಥೆ ಇಷ್ಟೊಂದು ಹದಗೆಟ್ಟಿದೆ. ಶಾ ಅವರು ಸರ್ಕಾರ ರಚನೆ ಮತ್ತು ಪತನ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ ಎಎಪಿ ವಕ್ತಾರ ಸೌರಭ್ ಭಾರದ್ವಾಜ್ .
ಟ್ವಿಟರ್‌ನಲ್ಲಿ #WhereIsAmitShah ಟ್ರೆಂಡಿಂಗ್
ದೆಹಲಿಯಲ್ಲಿ ಪೊಲೀಸರ ಪ್ರತಿಭಟನೆ ತೀವ್ರವಾಗಿದ್ದು ಪೊಲೀಸರು ಮೇಣದ ಬತ್ತಿ ಬೆಳಗಿ ಪ್ರತಿಭಟಿಸುತ್ತಿದ್ದಾರೆ. ಇತ್ತ ಟ್ವಿಟರ್‌ನಲ್ಲಿ#WhereIsAmitShah ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.