ತಿರುವನಂತಪುರ: ಕೇರಳ ಸರ್ಕಾರದ ತೀವ್ರ ಆಕ್ಷೇಪದ ನಡುವೆಯೇ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಅದಾನಿ ಏರ್‌ಪೋರ್ಟ್ಸ್ ಸಂಸ್ಥೆಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (ಎಎಐ) ಚಾಲನೆ ನೀಡಿದೆ.
ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಕೂಟ ಯುಡಿಎಫ್ ಈ ನಿರ್ಧಾರವನ್ನು ವಿರೋಧಿಸಿವೆ. ಆದರೆ, ಉದ್ಯಮ ಹಾಗೂ ಕೈಗಾರಿಕಾ ಸಂಘಟನೆಗಳು, ಇಲ್ಲಿನ ಹಲವಾರು ನಾಗರಿಕ ವೇದಿಕೆಗಳು ಎಎಐ ನಿರ್ಧಾರವನ್ನು ಸ್ವಾಗತಿಸಿವೆ.
ವಿಮಾನ ನಿಲ್ದಾಣದ ನಿರ್ವಹಣೆ, ಕಾರ್ಯಾಚರಣೆ ಗುತ್ತಿಗೆಯನ್ನು ಅದಾನಿ ಒಡೆತನದ ಕಂಪನಿಗೆ ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವಿಷಯದಲ್ಲಿ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭೂಮಿಯನ್ನು ಉಚಿತವಾಗಿ ನೀಡಿದೆ. ಹೀಗಾಗಿ ಇದರ ನಿರ್ವಹಣೆ ಜವಾಬ್ದಾರಿಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಸ್ಥಾಪಿಸಲಾದ ಕಂಪನಿಗೆ ವಹಿಸಬೇಕು ಎಂಬುದು ಕೇರಳ ಸರ್ಕಾರದ ವಾದವಾಗಿದೆ.
ತಿರುವನಂತರಪುರ, ಜೈಪುರ ಹಾಗೂ ಗುವಾಹಟಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆಗೆ ಸಂಬಂಧಿಸಿದಂತೆ ಅದಾನಿ ಏರ್‌ಪೋರ್ಟ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಎಐ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.