ಕೋಲ್ಕತ್ತ/ಕೂಚ್‌ಬಿಹಾರ: ಪ್ರಜಾಪ್ರಭುತ್ವ ರಕ್ಷಣೆಗಾಗಿ ರಥಯಾತ್ರೆ ನಡೆಸಲು ಅನುಮತಿ ಕೋರಿ ಬಿಜೆಪಿ ಬರೆದ ಪತ್ರಗಳಿಗೆ ಪ್ರತಿಕ್ರಿಯೆ ನೀಡದೆ ಮೌನವಾಗಿರುವ ಪಶ್ಚಿಮ ಬಂಗಾಳ ಸರ್ಕಾರವನ್ನು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ರಥಯಾತ್ರೆಯ ಬಗ್ಗೆ ಡಿಸೆಂಬರ್ 14ರ ಒಳಗಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶ ನೀಡಿದೆ.
ರಥಯಾತ್ರೆಗಳಿಗೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಬೇಕಿದ್ದ ಸರ್ಕಾರ ತಾಳಿರುವ ಮೌನ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸಿದೆ ಎಂದು ದ್ವಿಸದಸ್ಯ ವಿಭಾಗೀಯ ಪೀಠ ಛಾಟಿ ಬೀಸಿದೆ.
ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬಿಜೆಪಿ ಮೂವರು ಪ್ರತಿನಿಧಿಗಳ ಜತೆ ಡಿ.12ರ ಒಳಗಾಗಿ ಸಭೆ ನಡೆಸುವಂತೆಯೂ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸೂಚನೆ ನೀಡಿದೆ. ಡಿ. 14ರ ಒಳಗಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ. ರಾಜ್ಯದಲ್ಲಿ ಬಿಜೆಪಿಯ ರಥಯಾತ್ರೆಗಳು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದು ಎಂದು ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠ ಕೂಡ ಅನುಮತಿ ನಿರಾಕರಿಸಿತ್ತು. ಇದರಿಂದಾಗಿ ಕೂಚ್‌ಬಿಹಾರದಲ್ಲಿ ಅಮಿತ್ ಶಾ ಶುಕ್ರವಾರ ನಡೆಸಬೇಕಿದ್ದ ರಥಯಾತ್ರೆ ರದ್ದಾಗಿದೆ.
‘ರಥಯಾತ್ರೆ ತಡೆಯಲು ಸಾಧ್ಯವಿಲ್ಲ’
ನವದೆಹಲಿ: ಬಿಜೆಪಿಯ ರಥಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸವಾಲು ಹಾಕಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ರದ್ದಾಗಿಲ್ಲ, ಮುಂದೂಡಲಾಗಿದೆ. ರಾಜ್ಯದ ಬದಲಾವಣೆಗೆ ಬಿಜೆಪಿ ಬದ್ಧವಾಗಿದೆ. ಅದಕ್ಕಾಗಿ ರಥಯಾತ್ರೆಗೆ ಅನುಮತಿ ಪಡೆಯಲು ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಶಾ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಬಿಜೆಪಿಯ ಜನಪ್ರಿಯತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿದ್ದೆಗೆಡಿಸಿದೆ ಎಂದು ಅವರು ಟೀಕಿಸಿದರು.
ಶಾ ಭೇಟಿ ರದ್ದು
ಶುಕ್ರವಾರ ನಡೆಯಬೇಕಿದ್ದ ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ ರಥಯಾತ್ರೆ ರದ್ದಾಗಿದೆ. ಕೂಚ್‌ಬಿಹಾರಕ್ಕೆ ಬರಬೇಕಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ರದ್ದು ಪಡಿಸಿದ್ದಾರೆ.
ರಥಯಾತ್ರೆಯಲ್ಲಿ ರದ್ದಾದ ಕಾರಣ ಕೂಚ್‌ಬಿಹಾರಕ್ಕೆ ಬಂದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ನಿರಾಸೆಯಿಂದ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.