ADVERTISEMENT

ಬಜೆಟ್‌ಗೆ ವಿಪಕ್ಷಗಳು ಕಂಗಾಲು: ಅಮಿತ್‌ ಶಾ ಲೇವಡಿ

ಲೋಕಸಭೆ ಚುನಾವಣೆ–2019

ಪಿಟಿಐ
Published 2 ಫೆಬ್ರುವರಿ 2019, 20:13 IST
Last Updated 2 ಫೆಬ್ರುವರಿ 2019, 20:13 IST
   

ಡೆಹ್ರಾಡೂನ್‌: ಕೇಂದ್ರ ಸರ್ಕಾರದ ಬಜೆಟ್ ನೀಡಿದ ಏಟಿಗೆ ವಿರೋಧ ಪಕ್ಷಗಳು ಕಂಗಾಲಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಲೇವಡಿ ಮಾಡಿದ್ದಾರೆ.

ರೈತರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ಪರವಾದ ಬಜೆಟ್‌ ಕಂಡು ವಿರೋಧ ಪಕ್ಷಗಳು ತತ್ತರಿಸಿ ಹೋಗಿದ್ದು, ಅವುಗಳ ಜಂಘಾಬಲ ಉಡುಗಿ ಹೋಗಿದೆ ಎಂದರು.

ಶನಿವಾರ ನಡೆದ ಬಿಜೆಪಿ ಬೂತ್‌ ಮಟ್ಟದ ಕಾರ್ಯಕರ್ತರ ತ್ರಿಶಕ್ತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ADVERTISEMENT

ಪೀಯೂಷ್‌ ಗೋಯಲ್‌ ಬಜೆಟ್‌ ಮಂಡಿಸಿದ ನಂತರ ವಿರೋಧ ಪಕ್ಷಗಳ ಮುಖಂಡರ ಉತ್ಸಾಹ ಮಂಜುಗಡ್ಡೆಯಂತೆ ಕರಗಿ ಹೋಗಿದೆ. ಅವರ ನಗು ಮಾಸಿ, ಮುಖಗಳು ಬಾಡಿ ಹೋಗಿವೆ ಎಂದು ಶಾ ವ್ಯಂಗ್ಯವಾಡಿದ್ದಾರೆ.

ಸಿಂಗಪುರ ವರದಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಗ್ರಾಮೀಣಭಿವೃದ್ಧಿ ಮತ್ತು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿದೆ ಎಂದು ಸಿಂಗಾಪುರದ ಡಿಬಿಎಸ್‌ ಬ್ಯಾಂಕ್‌ ವಿಶ್ಲೇಷಿಸಿದೆ.

ಜುಲೈ ನಂತರ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ ಎಂದು ಬಿಡಿಎಸ್‌ ಆರ್ಥಿಕ ತಜ್ಞೆ ರಾಧಿಕಾ ರಾವ್‌ ಅಭಿಪ್ರಾಯಪಟ್ಟಿದ್ದಾರೆ.

**

ಮಧ್ಯಂತರ ಬಜೆಟ್‌ ‘ಚುನಾವಣಾ ಗಿಮಿಕ್‌’. ಲೋಕಸಭೆ ಚುನಾವಣೆಯಲ್ಲಿ ಮಧ್ಯಮ ವರ್ಗ ಮತ್ತು ರೈತರ ಮತಗಳನ್ನು ಸೆಳೆಯುವ ರಾಜಕೀಯ ತಂತ್ರ.

–ವಿ.ನಾರಾಯಣಸ್ವಾಮಿ, ಪುದುಚೆರಿ ಮುಖ್ಯಮಂತ್ರಿ

**

ರಾಮ ಮಂದಿರ: ನಿಲುವು ಸ್ಪಷ್ಟಪಡಿಸಲು ಒತ್ತಾಯ

ರಾಮ ಮಂದಿರ ನಿರ್ಮಾಣ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಅಮಿತ್‌ ಶಾ ಅವರು ಕಾಂಗ್ರೆಸ್‌ ಮತ್ತು ಇನ್ನಿತರ ವಿರೋಧ ಪಕ್ಷಗಳನ್ನು ಒತ್ತಾಯಿಸಿದ್ದಾರೆ.

ಮಂದಿರ ನಿರ್ಮಾಣ ಕುರಿತು ಬಿಜೆಪಿ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಕೂಡ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಶಾ ಒತ್ತಾಯಿಸಿದ್ದಾರೆ.

‌ಚುನಾವಣೆಗಾಗಿ ಪ್ರಣಾಳಿಕೆ ಸಿದ್ಧಪಡಿಸಲು ದೇಶದಾದ್ಯಂತ ಜನರಿಂದ 10 ಕೋಟಿ ಸಲಹೆ ಸಂಗ್ರಹಿಸಲು ಬಿಜೆಪಿ ತಿಂಗಳ ಅವಧಿಯ ಅಭಿಯಾನವನ್ನು ಭಾನುವಾರ ಆರಂಭಿಸಲಿದೆ.

**

ಮಸೂದೆಗೆ ಅನುಮೋದನೆ

ಪಟ್ನಾ: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೇಲ್ಜಾತಿ ಬಡವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಮಸೂದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ.

ಫೆಬ್ರುವರಿ 11ರಂದು ನಡೆಯುವ ಬಿಹಾರ ಬಜೆಟ್‌ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ ಮತ್ತು ಜಾರ್ಖಂಡ್‌ದಲ್ಲಿ ಈಗಾಗಲೇ ಶೇ 10 ಮೀಸಲಾತಿ ಜಾರಿಗೊಳಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.