ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಬಗ್ಗೆ ಜನರನ್ನು ತಪ್ಪು ದಾರಿಗೆಳೆಯುವ ಮೂಲಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಅಲ್ಪ ಸಂಖ್ಯಾತರ ಪೌರತ್ವವನ್ನು ಕಸಿಯುವುದಿಲ್ಲ ಎಂದು ನಾನು ಮುಸ್ಲಿಮರಿಗೆ ಭರವಸೆ ನೀಡುತ್ತೇನೆ ಎಂದು ಶಾ ಹೇಳಿದ್ದಾರೆ.
ಭಾನುವಾರ ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾ, ಲಾಹೋರ್‌ನ ಗುರುದ್ವಾರ ನನಕಾನಾ ಸಾಹೀಬ್ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ಅದೇ ವೇಳೆ ನೆರೆ ರಾಷ್ಟ್ರದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಣ್ತೆರೆದು ನೋಡುವಂತೆ ವಿಪಕ್ಷ ನಾಯಕರಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗುರುದ್ವಾರ ದಾಳಿಗೆ ವ್ಯಾಪಕ ಖಂಡನೆ
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಎಲ್ಲರಿಗೂ ಇರುವ ಉತ್ತರ ಇದು. ಗುರುದ್ವಾರ ನನಕಾನ ಸಾಹೀಬ್ ಮೇಲೆ ನಡೆದ ದಾಳಿ ನಂತರ ಅಲ್ಲಿರುವ ಸಿಖ್ ಸಮುದಾಯದವರುಭಾರತಕ್ಕೆ ಬರದೆ ಇನ್ನೆಲ್ಲಿಗೆ ಹೋಗಬೇಕು? ಸಿಎಎ ಬಗ್ಗೆ ವಿಪಕ್ಷಗಳು ಸುಳ್ಳುಗಳನ್ನು ಹರಡುತ್ತಿದ್ದು, ಜನರಿಗೆ ಸಿಎಎ ಬಗ್ಗೆ ಮನವರಿಕೆ ಮಾಡಲು ಅಭಿಯಾನ ಕೈಗೊಳ್ಳಬೇಕು ಎಂದು ಅಮಿತ್ ಶಾ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪೌರತ್ವ ಕಾಯ್ದೆಯ ಫಲಾನುಭವಿಗಳು ದಲಿತರು ಮತ್ತು ಬಡವರಾಗಿದ್ದಾರೆ. ಸಿಎಎಯನ್ನು ವಿರೋಧಿಸುವವರು ಈ ವರ್ಗದವರ ವಿರೋಧಿಗಳಾಗಿದ್ದಾರೆ . ರಾಹುಲ್, ಪ್ರಿಯಾಂಕಾ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ದಲಿತ ವಿರೋಧಿಯಾಗಿದ್ದಾರೆ ಎಂದು ಹೇಳಿದ ಶಾ, ಕೇಜ್ರಿವಾಲ್ ಜನರ ಹಾದಿ ತಪ್ಪಿಸುತ್ತಿದ್ದಾರೆ.ಕಾಂಗ್ರೆಸ್‌ನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಜನರ ಹಾದಿ ತಪ್ಪಿಸಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಗಲಭೆ ನಡೆಸುವ ಸರ್ಕಾರ ನಿಮಗೆ ದೆಹಲಿಯಲ್ಲಿ ಬೇಕೇ? ಎಂದು ಕೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಅಲ್ಪ ಸಂಖ್ಯಾತರ ಪೌರತ್ವ ನಷ್ಟವಾಗಲಿದೆ ಎಂದು ವಿಪಕ್ಷಗಳು ಹೇಳುತ್ತಿವೆ. ಆದರೆ ಅಲ್ಪ ಸಂಖ್ಯಾತರ ಪೌರತ್ವ ನಷ್ಟವಾಗುವುದಿಲ್ಲ. ಈ ಕಾಯ್ದೆ ಯಾರೊಬ್ಬರ ಪೌರತ್ವವನ್ನು ಕಸಿಯುವುದಿಲ್ಲ ಎಂದು ಶಾ ಹೇಳಿದ್ದಾರೆ.
ಇದನ್ನೂ ಓದಿ: ಯಾರ ಪೌರತ್ವವನ್ನೂ ಕಸಿಯಲು ಸಾಧ್ಯವಿಲ್ಲ: ಅಮಿತ್ ಶಾ
ಗಲಭೆಯುಂಟುಮಾಡಿದವರ ಮನೆಗೆ ಭೇಟಿ ನೀಡುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಗಲಭೆ ಸೃಷ್ಟಿಸುವವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.