ನವದೆಹಲಿ: ‘ಚುನಾವಣೆ ಎದುರಿಗೆ ಇಟ್ಟುಕೊಂಡು ಪಕ್ಷದ ಕೆಲ ನಾಯಕರು ದ್ವೇಷ ಭಾಷಣ ಮಾಡಬಾರದಾಗಿತ್ತು. ಅವರ ಮಾತುಗಳೇ ದೆಹಲಿಯಲ್ಲಿ ಪಕ್ಷಕ್ಕೆ ಇದ್ದ ಅವಕಾಶವನ್ನು ಚಿವುಟಿ ಹಾಕಿದವು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ‘ಟೈಮ್ಸ್ ನೌ ಸಮಿಟ್– 2020’ ಕಾರ್ಯಕ್ರಮದಲ್ಲಿಭಾಗವಹಿಸಿದ್ದಅವರು, ದೆಹಲಿ ಸೋಲಿನ ಬಗ್ಗೆ ಮಾತನಾಡಿದ್ದಾರೆ.
‘... ಮನೆಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ಮಾಡಬಹುದು’ಎಂಬ ಮಾತನ್ನು ಪಕ್ಷದ ಯಾರೂ ಆಡಿರಲಿಲ್ಲ. ಆದರೆ, ‘ಗುಂಡು ಹೊಡೆಯಿರಿ’, ‘ಚುನಾವಣೆ ಭಾರತ–ಪಾಕ್ ಪಂದ್ಯ’ ಎಂಬ ಮಾತುಗಳನ್ನು ಆಡಬಾರದಾಗಿತ್ತು. ಪಕ್ಷ ಇದರಿಂದ ಕೂಡಲೇ ಅಂತರ ಕಾಯ್ದುಕೊಳ್ಳುವಂತಾಯಿತು’ ಎಂದು ಅಮಿತ್ ಶಾ ಹೇಳಿದ್ದಾರೆ.
‘ಯಾರು ಏನೇ ಹೇಳಬಹುದು. ಆದರೆ, ನಮ್ಮ ಪಕ್ಷ ಏನು ಎಂದು ಜನರಿಗೆ ಗೊತ್ತಿತ್ತು. ಆದರೂ, ಇದು ನಮ್ಮ ಪಕ್ಷ ಮಾಡುವಂಥ ಸಾಧನೆಯಲ್ಲ. ದ್ವೇಷ ಬಾಷಣಗಳೇ ಈ ಫಲಿತಾಂಶಕ್ಕೆ ಕಾರಣ. ಜನರು ಏನನ್ನು ನೋಡಿ ಮತ ಚಲಾಯಿಸಿದ್ದಾರೆ ಎಂದು ಕೈ ಬರಹದಲ್ಲಿ ಬರೆದುಕೊಟ್ಟಂತೆ ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮ ಸೋಲಿಗೆ ದ್ವೇಷ ಭಾಷಣವೂ ಕಾರಣವಿರಬಹುದು’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಈ ಬಾರಿ ನಮಗೆ ಬಹುಮತ ಬರುತ್ತದೆ ಎಂದು ನಾನು ಲೆಕ್ಕ ಹಾಕಿದ್ದೆ. ಆದರೆ, ಈ ಫಲಿತಾಂಶ ಒಪ್ಪಿಕೊಳ್ಳಲು ನನಗೆ ಯಾವ ಹಿಂಜರಿಕೆ ಇಲ್ಲ. ಹಲವು ಸಂದರ್ಭಗಳಲ್ಲಿ ನನ್ನ ಲೆಕ್ಕ ಸರಿಯಾಗಿಯೇ ಇರುತ್ತೆ.ಆದರೆ, ಈ ಬಾರಿ ತಪ್ಪಾಗಿದೆ’ ಎಂದು ಅಮಿತ್ ಶಾ ವಿಷಾದದ ದನಿಯಲ್ಲಿ ಮತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.