ನವದೆಹಲಿ: ‘ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಿ ಎಂದು ಕೈಮುಗಿದು ಕೇಳುತ್ತೇನೆ’ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಮಾತುಕತೆ ನಡೆಸುವಂತೆ ಕುಕಿ ಮತ್ತು ಮೈತೇಯಿ ಸಮುದಾಯಗಳನ್ನು ಎಂದು ಬುಧವಾರ ಒತ್ತಾಯಿಸಿದರು.
ಈಶಾನ್ಯ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂಬ ವಿಚಾರವಾಗಿ ಲೋಕಸಭೆ ನಿರ್ಣಯ ಅಂಗೀಕರಿಸಿದ ಸಂದರ್ಭದಲ್ಲಿ ನಡೆದ ಚರ್ಚೆ ವೇಳೆ ಅವರು ಈ ಮನವಿ ಮಾಡಿದರು.
ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ಸಂಸದರು, ಮಣಿಪುರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ವಿಚಾರವಾಗಿ ಕೇಂದ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಆಗ, ಮಧ್ಯಪ್ರವೇಶಿಸಿದ ಅಮಿತ್ ಶಾ, ‘ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ ವಿಷಯವನ್ನು ರಾಜಕೀಯಗೊಳಿಸಬೇಡಿ’ ಎಂದು ವಿಪಕ್ಷಗಳನ್ನು ಒತ್ತಾಯಿಸಿದರು.
‘ಹಿಂಸಾಚಾರವೆಂಬ ವಿಷವರ್ತುಲಕ್ಕೆ ಸಿಲುಕಿ ಮಣಿಪುರ ನಲುಗುತ್ತಿದೆ ಎಂಬ ವಿಪಕ್ಷಗಳ ಮಾತನ್ನು ನಾನು ಒಪ್ಪುತ್ತೇನೆ. ಇಂತಹ ಘಟನೆಗಳನ್ನು ಯಾರೂ ಬೆಂಬಲಿಸಲು ಸಾಧ್ಯ ಇಲ್ಲ. ಈವರೆಗೆ ಏನು ನಡೆದಿದೆಯೋ ಅದು ನಾಚಿಕೆಗೇಡಿನ ಸಂಗತಿ. ಆದರೆ, ಅಲ್ಲಿನ ಘಟನೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಮತ್ತಷ್ಟು ನಾಚಿಕೆಗೇಡಿನದ್ದು’ ಎಂದು ಶಾ ವಾಗ್ದಾಳಿ ನಡೆಸಿದರು.
‘ಹಿಂಸಾಚಾರಪೀಡಿತ ಮಣಿಪುರದಲ್ಲಿ 152 ಜನರು ಮೃತಪಟ್ಟಿದ್ದು, 14,898 ಜನರನ್ನು ಬಂಧಿಸಲಾಗಿದೆ. ಮೇ 3ರಂದು ಹಿಂಸಾಚಾರ ಭುಗಿಲೆದ್ದಿದ್ದು, ಈ ಸಂಬಂಧ 1,106 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ’ ಎಂದು ಸಚಿವ ಶಾ ಸದನಕ್ಕೆ ತಿಳಿಸಿದರು.
ಮಣಿಪುರ ವಿದ್ಯಮಾನ ಕುರಿತು ಎರಡು ಗಂಟೆಗಳಷ್ಟು ಮಾತನಾಡಿದ ಶಾ, ರಾಜ್ಯದಲ್ಲಿ ಶಾಂತಿ ಸ್ಥಾಪನೆ ಪ್ರಯತ್ನಗಳಿಗೆ ಸಂಬಂಧಿಸಿ ಕೇಂದ್ರದೊಂದಿಗೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಸಹಕರಿಸುತ್ತಿದ್ದು, ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ಘಟನೆಗೆ ಸಂಬಂಧಿಸಿದ ವಿಡಿಯೊ ಕುರಿತು ಪ್ರಸ್ತಾಪಿಸಿದ ಶಾ, ‘ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವಂತೆ ಮಾಡುವ ಬದಲು ಡಿಜಿಪಿ ಅವರಿಗೆ ನೀಡಿದ್ದಲ್ಲಿ ತಪ್ಪಿತಸ್ಥರನ್ನು ಸೆರೆಹಿಡಿಯಲು ಅನುಕೂಲವಾಗುತ್ತಿತ್ತು’ ಎಂದರು.
ಸಂಸತ್‌ನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ಉದ್ದೇಶವಾದರೂ ಏನಿತ್ತು ಎಂದೂ ಶಾ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.