ADVERTISEMENT

ಪೆಟ್ರೋಲ್, ಡೀಸೆಲ್ ಎಕ್ಸೈಸ್‌ ಸುಂಕ ಕಡಿತ: ಮೋದಿ ಸಂವೇದನೆಯುಳ್ಳ ನಾಯಕ ಎಂದ ಶಾ

ಪಿಟಿಐ
Published 22 ಮೇ 2022, 1:25 IST
Last Updated 22 ಮೇ 2022, 1:25 IST
ಅಮಿತ್ ಶಾ – ಪಿಟಿಐ ಚಿತ್ರ
ಅಮಿತ್ ಶಾ – ಪಿಟಿಐ ಚಿತ್ರ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದ್ದಾರೆ.

ಸವಾಲಿನ ಜಾಗತಿಕ ಪರಿಸ್ಥಿತಿಯ ನಡುವೆಯೂ ನರೇಂದ್ರ ಮೋದಿ ಸರ್ಕಾರ ಜನರಿಗೆ ದೊಡ್ಡ ನಿರಾಳತೆ ಒದಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರ ಸಂವೇದನಾಶೀಲ ನಾಯಕ ಎಂದು ಅವರು ಬಣ್ಣಿಸಿದ್ದಾರೆ.

ಎಕ್ಸೈಸ್‌ ಸುಂಕ ಇಳಿಕೆ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ‘ಮೋದಿ ದೇಶದ ಪ್ರತಿಯೊಂದು ವರ್ಗದ ಬಗ್ಗೆ ಕಾಳಜಿ ವಹಿಸುವ ಸಂವೇದನಾಶೀಲ ನಾಯಕ. ಹಾಗಾಗಿ ಕಳೆದ 8 ವರ್ಷಗಳಿಂದ ದೇಶದ ಬಡವರು, ರೈತರು, ಜನಸಾಮಾನ್ಯರ ಹಿತಾಸಕ್ತಿ ಹಾಗೂ ಕಾಳಜಿಯೇ ಮೋದಿ ಸರ್ಕಾರದ ನಿರ್ಧಾರಗಳ ಕೇಂದ್ರಬಿಂದುವಾಗಿದೆ. ಈ ಜನಸ್ನೇಹಿ ನಿರ್ಧಾರಕ್ಕಾಗಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಶನಿವಾರ ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಿದೆ. ಅದೇ ರೀತಿ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ₹ 200 ಸಬ್ಸಿಡಿಯನ್ನು ನೀಡಲಾಗುವುದು ಎಂದು ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.