ADVERTISEMENT

ಶರದ್ ಪವಾರ್ ‘ಹಗರಣಗಳ ಸರದಾರ’, ಉದ್ಧವ್ ‘ಔರಂಗಜೇಬ ಅಭಿಮಾನಿಗಳ ಸಂಘದ ನಾಯಕ’: ಶಾ

ಮೃತ್ಯುಂಜಯ ಬೋಸ್
Published 21 ಜುಲೈ 2024, 12:59 IST
Last Updated 21 ಜುಲೈ 2024, 12:59 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ವಿರುದ್ದ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆಗೆ ಚಾಲನೆ ನೀಡಿದರು. 

ಪವಾರ್ ಅವರನ್ನು ‘ಹಗರಣಗಳ ಸರದಾರ’ ಎಂದು ಕಟುವಾಗಿ ಟೀಕಿಸಿದ ಶಾ, ಉದ್ದವ್‌ ಠಾಕ್ರೆ ಅವರನ್ನು ‘ಔರಂಗಜೇಬ್‌ ಅಭಿಮಾನಿಗಳ ಸಂಘದ ನಾಯಕ’ ಎಂದು ವಿಶ್ಲೇಷಿಸಿದರು. ಇದೇ ವೇಳೆ ಬಿಜೆಪಿ ನೇತೃತ್ವದ ಮಹಾಯುತಿ ಆಡಳಿತವನ್ನು ಶ್ಲಾಘಿಸಿದರು.

ADVERTISEMENT

 ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ವಿರುದ್ಧವು ಹರಿಹಾಯ್ದ ಅವರು, ‘ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷದ ಪರಾಭವದ ಬಳಿಕ ರಾಹುಲ್‌ ಅವರ ಅಹಂಕಾರವೂ ಪತನವಾಗಲಿದೆ’ ಎಂದರು. 

 ‘ಬಿಜೆಪಿ ನೇತೃತ್ವದ ಈಗಿನ ಮಹಾಯುತಿ ಮೈತ್ರಿ ಸರ್ಕಾರವು ಜನಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಮರಾಠರಿಗೆ ಮೀಸಲಾತಿ ನೀಡಿದ್ದು ಏಕನಾಥ ಶಿಂಧೆ, ದೇವೇಂದ್ರ ಫಡಣವೀಸ್‌, ಅಜಿತ್ ಪವಾರ್ ಜೋಡಿ ಮಾತ್ರ’ ಎಂದರು. 

 ಪುಣೆಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ, ಮಹಾವಿಕಾಸ ಅಘಾಡಿಯ ಮೈತ್ರಿಪಕ್ಷಗಳಾದ ಕಾಂಗ್ರೆಸ್‌, ಶರದ್ ಪವಾರ್‌ ನೇತೃತ್ವದ ಎನ್‌ಸಿಪಿ, ಉದ್ಧವ್ ನೇತೃತ್ವದ ಶಿವಸೇನೆ ವಿರುದ್ಧ ತೀವ್ರ ವಾಗ್ದಾಳಿ  ನಡೆಸಿದರು. ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಗೆ ಮಹಾಯುತಿ ಮೈತ್ರಿ ಹೋರಾಟದಿಂದ ತೀವ್ರ ಹಿನ್ನಡೆಯಾಗಿತ್ತು.

 ‘ಶರದ್‌ ಪವಾರ್ ಅವರು ಹಗರಣಗಳ ಸರದಾರ. ದೇಶದಲ್ಲಿ ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದ ಯಾರಾದರೂ ನಾಯಕರಿದ್ದರೆ ಅದು ಶರದ್‌ ಪವಾರ್ ಮಾತ್ರ. ಇನ್ನು ಅದಕ್ಕೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

 ‘ಈ ಹಿಂದೆ ಬಿಜೆಪಿ ಜೊತೆಗೆ ಮೈತ್ರಿಯನ್ನು ಹೊಂದಿದ್ದ ಉದ್ಧವ್‌ ಠಾಕ್ರೆ ಅವರನ್ನೂ ಗುರಿಯಾಗಿಸಿದ ಶಾ, ‘ಇಲ್ಲಿ, ಔರಂಗಜೇಬ್‌ ಅಭಿಮಾನಿಗಳ ಸಂಘವಿದೆ. ಅದು, ಭಾರತಕ್ಕೆ ರಕ್ಷಣೆಯ ಭರವಸೆ ನೀಡುವುದಿಲ್ಲ. ಅದರ ಬಗ್ಗೆ ನಿಮಗೆ ಗೊತ್ತಿದೆಯಾ? ಉದ್ಧವ್‌ ಠಾಕ್ರೆ ಅವರು ಆ ಅಭಿಮಾನಿಗಳ ಸಂಘದ ನಾಯಕರು’ ಎಂದು ಟೀಕಿಸಿದರು.

 ‘ಮೊಹಮ್ಮದ್‌ ಅಜ್ಮಲ್‌ ಕಸಬ್ (ಮುಂಬೈ ಉಗ್ರರ ದಾಳಿ ಕೃತ್ಯದ ಆರೋಪಿ) ಜೊತೆಗೆ ಗುರುತಿಸಿಕೊಂಡಿದ್ದವರ ಜೊತೆಗೂಡಿ ಉದ್ಧವ್‌ ಊಟ ಮಾಡುತ್ತಾರೆ. ವಿವಾದಿತ ಇಸ್ಲಾಮಿಕ್‌ ಬೋಧಕ ಝಾಕೀರ್ ನಾಯ್ಕಗೆ ಶಾಂತಿಧೂತ ಪ್ರಶಸ್ತಿ ನೀಡಿದವರಿಗೆ ಅವರು ಬೆಂಬಲಿಸುತ್ತಾರೆ. ಪಿಎಫ್‌ಐ ಬೆಂಬಲಿಸಿದವರಿಗೂ ಬೆಂಬಲಿಸುತ್ತಾರೆ. ಅಭಿಮಾನಿಗಳ ಸಂಘವು ಮಹಾರಾಷ್ಟ್ರ ಅಥವಾ ಭಾರತ ಸುರಕ್ಷಿತವಾಗಿ ಇರಲು ಅವಕಾಶ ನೀಡುವುದಿಲ್ಲ. ಅಂತಹ ಭದ್ರತೆ ನೀಡಲು ಶಕ್ತವಾಗಿರುವುದು ಬಿಜೆಪಿ ಮಾತ್ರ’ ಎಂದು ಹೇಳಿದರು.

 ರಾಹುಲ್‌ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್‌ ಪಕ್ಷ ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಗೆದ್ದಿರುವ ಸೀಟುಗಳನ್ನು ಕೂಡಿದರೂ 240ರ ಗಡಿ ದಾಟದು. ಇತ್ತೀಚಿನ ಚುನಾವಣೆಯಲ್ಲಿ ಜನತೆ ಮೋದಿಗೆ ಅವಕಾಶ ನೀಡಿದ್ದಾರೆ. ಬಿಜೆಪಿ ಗೆದ್ದಿದೆ’ ಎಂದರು.

 ‘ಲೋಕಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್‌ ಮತ್ತು ಮೈತ್ರಿ ಪಕ್ಷಗಳು, ಸಂವಿಧಾನ ಇರುವುದಿಲ್ಲ, ಮೀಸಲಾತಿ ಅಂತ್ಯವಾಗಲಿದೆ ಎಂದು ನಕಲಿ ಸಂಕಥನ ಸೃಷ್ಟಿಸಿದ್ದವು. ದೇಶದಲ್ಲಿ ಮೀಸಲಾತಿಯನ್ನು ಬಲಪಡಿಸಿದವರು ಇದ್ದರೆ ಅದುಮೋದಿ ಮಾತ್ರ’ ಎಂದರು.

ಮಹಾರಾಷ್ಟ್ರದಲ್ಲಿಯೂ ಯಾವಾಗ ಬಿಜೆಪಿ ಸರ್ಕಾರ ಇದೆಯೋ ಆಗ ಮರಾಠರಿಗೆ ಮೀಸಲಾತಿ ನೀಡಲಾಗಿಎ. ಯಾವಾಗ ಪವಾರ್ ಇರುವ ಸರ್ಕಾರ ಇತ್ತೋ ಆಗ ಮೀಸಲಾತಿ ರದ್ದುಪಡಿಸಲಾಗಿದೆ ಎಂದು ಶಾ ಹೇಳಿದರು. 

ಹಾಲಿನ ಪೌಡರ್ ಆಮದು ಇಲ್ಲ –ಶಾ

ಮುಂಬೈ: ಹಾಲಿನ ಪೌಡರ್ ಅನ್ನು ಆಮದು ಮಾಡಿಕೊಳ್ಳುವ ಯಾವುದೇ ಚಿಂತನೆ ಕೇಂದ್ರ ಸರ್ಕಾರದ ಮುಂದಿಲ್ಲ. ಮಹಾವಿಕಾಸ ಆಘಾಡಿ ಮೈತ್ರಿ ಪಕ್ಷಗಳು ಈ ಬಗ್ಗೆ ತಪ್ಪು ಮಾಹಿತಿ  ಹರಡುತ್ತಿವೆ’  ಎಂದು ಕೇಂದ್ರದ ಗೃಹ ಸಹಕಾರ ಸಚಿವ ಅಮಿತ್ ಶಾ ಹೇಳಿದರು.

‘ಪ್ರಧಾನಿ ಮೋದಿ ಆಡಳಿತಾವಧಿಯ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಕೆ.ಜಿ ಪೌಡರ್‌ ಅನ್ನು ಆಮದು ಮಾಡಿಕೊಳ್ಳಲಾಗಿಲ್ಲ. ಮುಂದಿನ ಐದು ವರ್ಷಗಳಲ್ಲೂ ಒಂದು ಗ್ರಾಂ ಪೌಡರ್ ಅನ್ನು ಆಮದು ಮಾಡಿಕೊಳ್ಳುವುದಿಲ್ಲ’ ಎಂದು ಶಾ ಸ್ಪಷ್ಟಪಡಿಸಿದರು.

ಮನಮೋಹನ್‌ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವನ್ನು ಟೀಕಿಸಿದ ಅವರು ಆಮದು ನಿರ್ಧಾರ ಕುರಿತು ಆಗಲೇ ಸುತ್ತೋಲೆ ಹೊರಡಿಸಲಾಗಿತ್ತು. ಆಗ ಶರದ್‌ ಪವಾರೂ ಅವರು ಸರ್ಕಾರದಲ್ಲಿದ್ದರು ಎಂದರು. ಲೀಟರ್ ಹಾಲಿಗೆ ₹ 40 ನೀಡಬೇಕು ಎಂಬುದು ಸೇರಿ ಹಾಲು ಉತ್ಪಾದಕರು ರಾಜ್ಯದಲ್ಲಿ ಈಚೆಗೆ ನಡೆಸಿದ್ದ ಪ್ರತಿಭಟನೆಯನ್ನು ಉಲ್ಲೇಖಿಸಿ ಅಮಿತ್ ಶಾ ಈ ಮಾತು ಹೇಳಿದರು.

ಭ್ರಷ್ಟಾಚಾರ ಕಾನೂನುಬದ್ಧಗೊಳಿಸಿದ್ದೇ ಬಿಜೆಪಿ –ಎನ್‌ಸಿಪಿ ತಿರುಗೇಟು

ಮುಂಬೈ: ‘ಭ್ರಷ್ಟಾಚಾರವನ್ನು ಕಾನೂನುಬದ್ಧ ಗೊಳಿಸಿದ್ದೇ ಬಿಜೆಪಿ. ಆ ಪಕ್ಷ  ರಾಜಕೀಯ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತದೆ. ಅವರು ಬಿಜೆಪಿ ಸೇರುತ್ತಿದ್ದಂತೆಯೇ ಪರಿಶುದ್ಧರು ಎಂಬ ಹಣೆಪಟ್ಟಿ ನೀಡುತ್ತದೆ’ ಎಂದು ಎನ್‌ಸಿಪಿ ತಿರುಗೇಟು ನೀಡಿದೆ.

ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ (ಶರದ್‌ ಪವಾರ್) ರಾಷ್ಟ್ರೀಯ ವಕ್ತಾರ ಕ್ಲೈಡ್‌ ಕ್ರಾಸ್ಟೊ ಅವರು ‘ಇದು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವ ಬಿಜೆಪಿಯ ವಾಷಿಂಗ್ ಮಷಿನ್‌ ಪ್ರಕ್ರಿಯೆಯೂ ಆಗಿದೆ’ ಎಂದು ಟೀಕಿಸಿದ್ದಾರೆ.   ಮಹಾರಾಷ್ಟ್ರದ ಜನರು ಬಿಜೆಪಿ ಮತ್ತು ಅದರ ಜೊತೆಗಿರುವ ಶಿವಸೇನೆ (ಶಿಂದೆ ಬಣ) ಎನ್‌ಸಿಪಿ (ಅಜಿತ್ ಪವಾರ್ ಬಣ)ವನ್ನು ತಿರಸ್ಕರಿಸಿದ್ದಾರೆ. ಈಗಲೂ ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಇದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.