ADVERTISEMENT

ಸ್ವಚ್ಛತೆ ಬಗ್ಗೆ ಜನಾಂದೋಲನ ಮಾಡಿದ ಏಕೈಕ ಪ್ರಧಾನಿ ಮೋದಿ: ಅಮಿತ್ ಶಾ 

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 12:58 IST
Last Updated 2 ಅಕ್ಟೋಬರ್ 2019, 12:58 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸುವಂತೆ ಜನರಿಗೆ ಕರೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ವಿಷಯದಲ್ಲಿ ಜನಾಂದೋಲನ ಆಗಬೇಕು ಎಂದಿದ್ದಾರೆ.

ಗಾಂಧಿ ಜಯಂತಿ ಸಂದರ್ಭದಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಶಾ, ದೆಹಲಿಯ ಬಿಜೆಪಿ ನೇತಾರರೊಂದಿಗೆ ಬಿಗಿ ಭದ್ರತೆ ನಡುವೆ ಪಾದಯಾತ್ರೆ ನಡೆಸಿದ್ದಾರೆ.

ಪಾದಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಸೇರಿದ ಸಭೆಯಲ್ಲಿ ಬಳಸಿ ಬಿಸಾಡುವ ಪಾಸ್ಟಿಕ್‌ನಿಂದಾಗುವ ಗಂಡಾಂತರದ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಈ ರೀತಿಯ ಪ್ಲಾಸ್ಟಿಕ್ ಸುಮಾರು 400 ವರ್ಷಗಳಾದರೂ ಮಣ್ಣಿನಲ್ಲಿ ಕರಗುವುದಿಲ್ಲ. ಇದರಿಂದಾಗಿ ಪ್ರಾಣಿ ಜೀವ ಸಂಕುಲಕ್ಕೂ ಹಾನಿಯುಂಟಾಗುತ್ತಿದೆ ಎಂದಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮತ್ತು ದೇಶದ ಜನರು ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕಾರ್ಯ ಬಗ್ಗೆ ಜನಾಂದೋಲನ ಮಾಡಬೇಕು. ಬಳಸಿ ಬಿಸಾಡುವ ಪ್ಲಾಸ್ಟಿಕ್ ದೇಶ ಮತ್ತು ಜಗತ್ತಿಗೇ ಮಾರಕ ಎಂದಿದ್ದಾರೆ ಶಾ.

ಮಹಾತ್ಮ ಗಾಂಧಿಯವರ 150ನೇ ಜಯಂತಿ ಪ್ರಯುಕ್ತ ಗಾಂಧಿಯವರ ಆಶಯ ಮತ್ತು ತತ್ವಗಳನ್ನು ಪಸರಿಸುವುದಕ್ಕಾಗಿ ನರೇಂದ್ರ ಮೋದಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವತ್ತು ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಾಂಧಿ ಜಗತ್ತಿಗೇ ಸತ್ಯಾಗ್ರಹದ ಶಕ್ತಿಯನ್ನು ಅರಿಯುವಂತೆ ಮಾಡಿದವರು.

ಮಹಾತ್ಮಗಾಂಧಿ ಸ್ವಚ್ಛತೆಯ ರಾಯಭಾರಿ ಆಗಿದ್ದರು. ಸ್ವಾತಂತ್ರ್ಯ ನಂತರ ಅದನ್ನು ಜನಾಂದೋಲವಾಗಿ ಮಾಡಿದ ಏಕೈಕ ಪ್ರಧಾನಿ ನರೇಂದ್ರ ಮೋದಿ. ಗಾಂಧಿಯವರ ಸ್ವಚ್ಛತಾ ಆಶಯವನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮ ವಹಿಸಿದ್ದರು ಎಂದು ಅಮಿತ್ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.