ADVERTISEMENT

ಟಿಎಂಸಿ, ಕಾಂಗ್ರೆಸ್‌ ನಾಯಕರಿಗೆ ಅಮಿತ್ ಶಾ ತಿರುಗೇಟು

ಕೋಮುವಾದಿ, ಪಿಒಕೆ ಹಿಂಪಡೆಯಿರಿ ಎಂದು ಕುಟುಕಿದ ನಾಯಕರು

ಪಿಟಿಐ
Published 12 ಡಿಸೆಂಬರ್ 2023, 16:16 IST
Last Updated 12 ಡಿಸೆಂಬರ್ 2023, 16:16 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಜಮ್ಮು– ಕಾಶ್ಮೀರಕ್ಕೆ ಸಂವಿಧಾನದ 370ನೆಯ ವಿಧಿ ಅಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಸಮಾನ ನಾಗರಿಕ ಸಂಹಿತೆಯು ಬಿಜೆಪಿಯ ‘ಕೋಮುವಾದ ಮತ್ತು ವಿಭಜಿಸುವ ಕಾರ್ಯಸೂಚಿ’ ಆಗಿದೆ ಎಂದು ಹೇಳಿದ್ದಕ್ಕೆ ಗೃಹ ಸಚಿವ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು.

‘ರಾಮ ಮಂದಿರವನ್ನು ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ನಿರ್ಮಿಸಲಾಗಿದೆ, ಸಂವಿಧಾನದ 370ನೇ ವಿಧಿ ಅಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಗೆ ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ. ಕೋಮುವಾದಿ ಕಾರ್ಯಸೂಚಿಯನ್ನು ಸುಪ್ರೀಂಕೋರ್ಟ್‌ ಮುಂದಿಡುತ್ತಿದೆ ಎಂದು ಹೇಳಲು ನೀವು ಬಯಸುವಿರಾ?’ ಎಂದು ಶಾ ತರಾಟೆಗೆ ತೆಗೆದುಕೊಂಡರು.

ಯುಸಿಸಿ ಬಗ್ಗೆ ಪ್ರಸ್ತಾಪಿಸಿ, ‘ಸಂವಿಧಾನ ರೂಪಿಸಿದವರು ಕೂಡ ಕೋಮುವಾದಿ ಅಜೆಂಡಾ ಅನುಸರಿಸಲು ಹೇಳುತ್ತಿದ್ದಾರೆ ಎಂದು ಹೇಳುವಿರಾ?‘ ಎಂದು ಪ್ರಶ್ನಿಸಿದರು.

ADVERTISEMENT

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮತ್ತೆ ಪಡೆಯಲು ಸರ್ಕಾರ ಕಾಲನಿಗದಿ ಪಡಿಸಬೇಕು ಎಂದು ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ ಅವರು ಕೋರಿದಾಗ ಶಾ ಮತ್ತು ಚೌಧರಿ ನಡುವೆ ವಾಗ್ವಾದ ನಡೆಯಿತು.

2024ರ ಲೋಕಸಭೆ ಚುನಾವಣೆಗೆ ಮೊದಲು ಸರ್ಕಾರ ಪಿಒಕೆಯನ್ನು ಹಿಂದಕ್ಕೆ ಪಡೆಯುವುದೇ ಎಂದು ಚೌಧರಿ ಅವರು ಕೇಳಿದರು. 

‘ಕಾಂಗ್ರೆಸ್‌ ಏನನ್ನೂ ಮಾಡಿಲ್ಲ ಎಂದುಕೊಳ್ಳೋಣ ಆದರೆ ನೀವು ದೃಢನಿರ್ಧಾರ ಕೈಗೊಳ್ಳುವವರು ಮತ್ತು ಪ್ರಬಲರು. ನೀವು ಪಿಒಕೆ ಹಿಂದಕ್ಕೆ ಪಡೆಯಬೇಕು. ಚುನಾವಣೆಗೆ ಮೊದಲು ನೀವು ಅದನ್ನು ಪಡೆಯುವಿರಾ ಎಂದು ನಾವು ನೋಡಬಯಸುತ್ತೇವೆ. ಸದನದೊಳಗೆ ನೀವು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತೀರಿ’ ಎಂದು ಚೌಧರಿ ಕುಟುಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾ ಅವರು ‘ಯಾರ ಅಧಿಕಾರಾವಧಿಯಲ್ಲಿ ನಾವು ಅಕ್ಸಾಯಿಚಿನ್‌ ಮತ್ತು ಪಿಒಕೆಯನ್ನು ಕಳೆದುಕೊಂಡೆವು ಎಂಬುದನ್ನು ನಾನು ಕೇಳ ಬಯಸುತ್ತೇನೆ’ ಎಂದರು.

ಸುಗತ ರಾಯ್‌ ಅವರೂ ಪಿಒಕೆ ಬಗ್ಗೆ ಪ್ರಸ್ತಾಪಿಸಿದರು. ಆಗ ಶಾ, ‘ಕಾಂಗ್ರೆಸ್‌ ರೂಪಿಸಿದ ವಿನ್ಯಾಸದಲ್ಲಿ ಪಶ್ಚಿಮಬಂಗಾಳ ಕೂಡ ಬಾಂಗ್ಲಾದೇಶದ ಭಾಗವಾಗಬೇಕಿತ್ತು. ಆದರೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಹಾಗಾಗದಂತೆ ನೋಡಿಕೊಂಡರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.