ADVERTISEMENT

ಸರ್ದಾರ್‌ ಪಟೇಲರ 150ನೇ ಜನ್ಮದಿನ: ಜನನ, ಮರಣ ನೋಂದಣಿಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

ಪಿಟಿಐ
Published 29 ಅಕ್ಟೋಬರ್ 2024, 14:29 IST
Last Updated 29 ಅಕ್ಟೋಬರ್ 2024, 14:29 IST
   

ನವದೆಹಲಿ: ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸುವ ಭಾಗವಾಗಿ ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ, ಭಾರತ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತಾಲಯದ ಆವರಣದಲ್ಲಿ ಪಟೇಲ್ ಅವರ ಪ್ರತಿಮೆ ಅನಾವರಣಗೊಳಿಸಿದ ಸಂದರ್ಭದಲ್ಲಿ ಆ್ಯಪ್‌ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು.

‘ನಾಗರಿಕ ನೋಂದಣಿ ವ್ಯವಸ್ಥೆ (CRS) ಮೊಬೈಲ್ ಆ್ಯಪ್‌ ಅನ್ನು ಭಾರತ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತಾಲಯ ಅಭಿವೃದ್ಧಿಪಡಿಸಿದೆ. ಇದರಿಂದ ಜನನ ಹಾಗೂ ಮರಣ ನೋಂದಣಿಗೆ ಸದ್ಯ ತೆಗೆದುಕೊಳ್ಳುತ್ತಿರುವ ಸಮಯ ಕಡಿಮೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯಡಿ ಆಡಳಿತದಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ನೂತನ ಆ್ಯಪ್‌ ಮೂಲಕ ನಾಗರಿಕರು ಜನನ ಹಾಗೂ ಮರಣ ನೋಂದಣಿಯನ್ನು ಎಲ್ಲಿಂದಲಾದರೂ, ಯಾವಾಗಲಾದರೂ ಮತ್ತು ಆಯಾ ರಾಜ್ಯಗಳ ಭಾಷೆಯಲ್ಲಿ ನೋಂದಾಯಿಸಬಹುದಾಗಿದೆ’ ಎಂದರು.

ADVERTISEMENT

‘ಏಕತೆಯ ಎಳೆಯ ಬಳಸಿ ಇಡೀ ದೇಶವನ್ನು ಒಗ್ಗೂಡಿಸಿ, ಬಲಿಷ್ಠ ಭಾರತವನ್ನು ಸರ್ದಾರ್ ಪಟೇಲರು ಕಟ್ಟಿದರು. ಉಕ್ಕಿನ ಮನುಷ್ಯನ ಪ್ರತಿಮೆಯು ದೇಶದ ಹಿತಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರ ಪ್ರತೀಕವಾಗಿದೆ. ಅವರ ಪ್ರತಿಮೆಯು ದೇಶದ ಪ್ರಜಾಪ್ರಭುತ್ವ ಸ್ಥಾಪನೆ ಮತ್ತು ಅವರ ಬದ್ಧತೆಗೆ ಸಾಕ್ಷಿಯಂತಿದೆ’ ಎಂದಿದ್ದಾರೆ.

‘ಸರ್ದಾರ್ ಅವರ ಜನ್ಮದಿನ ಅ. 31ರಂದು. ಆದರೆ ಈ ಬಾರಿ ದೀಪಾವಳಿ ಹಿನ್ನೆಲೆಯಲ್ಲಿ ಎರಡು ದಿನ ಮುಂಚಿತವಾಗಿ ‘ಏಕತೆಗಾಗಿ ಓಟ’ವನ್ನು ಆಯೋಜಿಸಲಾಗಿದೆ’ ಎಂದು ಶಾ ತಿಳಿಸಿದ್ದಾರೆ. 

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1875ರ ಅ. 31ರಂದು ಗುಜರಾತ್‌ನ ಜಾಡಿಯಾದ್‌ನಲ್ಲಿ ಜನಿಸಿದರು. ದೇಶದ ಮೊದಲ ಗೃಹ ಸಚಿವರಾದ ಪಟೇಲರ ಜನ್ಮದಿನವನ್ನು 2014ರಿಂದ ‘ರಾಷ್ಟ್ರೀಯ ಏಕತಾ ದಿನ’ ಎಂದು ಆಚರಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 550 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.