ನವದೆಹಲಿ: ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಇಂದು ಭೇಟಿ ಮಾಡಿ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.
ಬಿಜೆಪಿಯ ಸಂಸ್ಥಾಪಕರಾದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಂಥ ಹಿರಿಯ ನಾಯಕರನ್ನೇ ಮೋದಿ ಮತ್ತು ಅಮಿತ್ ಶಾ ಜೋಡಿ ಅಗೌರವಿಸಿದೆ ಎಂದು ವಿರೋಧಪಕ್ಷಗಳುಈಗಾಗಲೇ ಟೀಕಿಸಿವೆ. ಇದರ ಜತೆಗೇ, ಪಕ್ಷ ಸಾಗುತ್ತಿರುವ ಹಾದಿಯ ಬಗ್ಗೆ ಅಡ್ವಾಣಿ ಮುನಿಸಿಕೊಂಡಿದ್ದಾರೆ ಎಂದುಅವರ ಇತ್ತೀಚಿನ ಅಭಿಪ್ರಾಯಗಳ ಆಧಾರದಲ್ಲಿ ವಿಶ್ಲೇಷಿಸಲಾಗುತ್ತಿತ್ತು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಈ ನಡೆ ಇಟ್ಟಿದ್ದಾರೆ ಎನ್ನಲಾಗಿದೆ.
ಅಡ್ವಾಣಿ ಅವರು ಕಳೆದ ಆರು ಚುನಾವಣೆಗಳಿಂದಲೂ ಪ್ರತಿನಿಧಿಸಿಕೊಂಡು ಬರುತ್ತಿರುವ ಗುಜರಾತ್‌ನ ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಈ ಬಾರಿ ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್ ಶಾ ಸ್ಪರ್ಧೆ ಮಾಡುತ್ತಿದ್ದಾರೆ. ಕಾನ್ಪುರ ಲೋಕಸಭೆ ಕ್ಷೇತ್ರದಿಂದ ಮುರಳಿ ಮನೋಹರ ಜೋಷಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ಪಕ್ಷ ಹೇಳಿದೆ ಎಂದು ಜೋಷಿ ಇತ್ತೀಚೆಗೆ ಬಹಿರಂಗವಾಗಿಯೇ ಹೇಳಿದ್ದರು.
ದೀರ್ಘಕಾಲ ಪ್ರತಿನಿಧಿಸಿಕೊಂಡು ಬಂದ ಗಾಂಧಿ ನಗರ ಕ್ಷೇತ್ರದಿಂದ ಟಿಕೆಟ್ ನೀಡದ ಬಗ್ಗೆ ಎಲ್ಲಿಯೂ ಮಾತನಾಡದೇ ಇದ್ದ ಅಡ್ವಾಣಿ ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ‘ರಾಷ್ಟ್ರ ಮೊದಲು, ಪಕ್ಷ ನಂತರ, ಸ್ವಹಿತ ಉಳಿದದ್ದು,’ಎಂಬ ಲೇಖನದ ಮೂಲಕ ಮನದಾಳ ಹೊರ ಹಾಕಿದ್ದರು. ಆ ಲೇಖನದಲ್ಲಿ ಬಿಜೆಪಿಗೆ ಪ್ರಜಾಪ್ರಭುತ್ವದ ಆಶಯಗಳ ಪಾಠ ಮಾಡಿದ್ದ ಅಡ್ವಾಣಿ, ‘ಬಿಜೆಪಿಯು ತನ್ನ ವಿರುದ್ಧದ ಟೀಕೆಗಳನ್ನು ದೇಶದ್ರೋಹ ಎಂದು ವ್ಯಾಖ್ಯಾನಿಸಬಾರದು,’ಎಂದು ಹೇಳಿದ್ದರು.
ಇನ್ನೊಂದೆಡೆ, ಅಡ್ವಾಣಿ ಮತ್ತು ಜೋಷಿ ಅವರನ್ನು ವಿರೋಧ ಪಕ್ಷಗಳು ಭೇಟಿಯಾಗಿ ಮಾತುಕತೆ ನಡೆಸಿವೆ ಎಂಬ ವರದಿಗಳು ಬಿಜೆಪಿಯಲ್ಲಿ ಸಣ್ಣ ನಡುಕ ಹುಟ್ಟಿಸಿದೆ. ಸದ್ಯ ಮೋದಿ ಪ್ರತಿನಿಧಿಸುತ್ತಿರುವವಾರಾಣಸಿಯನ್ನು ಈ ಹಿಂದೆ ಬಹುಕಾಲ ಪ್ರತಿನಿಧಿಸಿದ್ದಜೋಷಿ ಅವರನ್ನು ಮೋದಿ ವಿರುದ್ಧ ಈ ಬಾರಿ ಅದೇ ಕ್ಷೇತ್ರದಲ್ಲೇ ನಿಲ್ಲಿಸಲು ವಿರೋಧ ಪಕ್ಷಗಳು ಪ್ರಯತ್ನ ಮಾಡುತ್ತಿವೆ ಎಂಬ ಸುಳಿವುಸಿಗುತ್ತಲೇ ಅಮಿತ್ ಶಾ ಇಬ್ಬರನ್ನೂ ಭೇಟಿಯಾಗಿ ಮಾತನಾಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯಾದ ನಂತರ ಅಮಿತ್ ಶಾ ಈ ಇಬ್ಬರೂ ಹಿರಿಯ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.