ನವದೆಹಲಿ:ಕಾಶ್ಮೀರದಲ್ಲಿ ಉಗ್ರ ದಾಳಿ ನಡೆಯಲಿದೆ ಎಂಬ ಗುಪ್ತಚರ ಸುಳಿವಿನ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿದರು.ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ಡೊಭಾಲ್,ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಗುಬ್ಬಾ ಸೇರಿ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದ ಬೆನ್ನಲ್ಲೇ ಈ ಸಭೆ ನಡೆದಿದೆ.
ಉಗ್ರ ದಾಳಿ ಭೀತಿ ಹಿನ್ನೆಲೆಯಲ್ಲಿ ಶುಕ್ರವಾರ ಅಮರನಾಥ ಯಾತ್ರೆ ರದ್ದುಗೊಳಿಸಿದ್ದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಾಜ್ಯ ಬಿಟ್ಟು ವಾಪಸ್ ತೆರಳುವಂತೆ ಯಾತ್ರಿಕರಿಗೆ ಸೂಚಿಸಿತ್ತು. ಕಳೆದರೆಡು ದಿನಗಳಲ್ಲಿ ಸಾವಿರಾರು ಯಾತ್ರಿಕರು ರಾಜ್ಯದಿಂದ ವಾಪಸ್ ತೆರಳಿದ್ದಾರೆ. ವಿದೇಶಿಯರೂ ಸೇರಿದಂತೆಅಂದಾಜು 20,000 ಪ್ರವಾಸಿಗರ ಪೈಕಿ ಶೇ 95ರಷ್ಟು ಮಂದಿ ಶುಕ್ರವಾರದ ಬಳಿಕ ರಾಜ್ಯದಿಂದ ವಾಪಸ್ ತೆರಳಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿಎಎನ್‌ಐಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ನಾಲ್ಕೈದು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 25 ಸಾವಿರದಿಂದ 30 ಸಾವಿರ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಮಧ್ಯೆ, ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪಾಕಿಸ್ತಾನಿ ಗಡಿ ಕಾರ್ಯಪಡೆ (ಬಿಎಟಿ) ಯೋಧರು ಮತ್ತು ಭಯೋತ್ಪಾದಕರು ಗಡಿ ನುಸುಳಿ ಭಾರತೀಯ ಸೇನಾ ಪೋಸ್ಟ್‌ಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಇದನ್ನು ತಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಪಾಕಿಸ್ತಾನದ ಕಮಾಂಡೊಗಳು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.
‘ಕಳೆದ 36 ಗಂಟೆಗಳಲ್ಲಿ ಭಯೋತ್ಪಾದಕರನ್ನು ಭಾರತದ ಗಡಿಯೊಳಕ್ಕೆ ನುಸುಳುವಂತೆ ಮಾಡಲು ಪಾಕಿಸ್ತಾನ ವಿಫಲ ಯತ್ನ ನಡೆಸಿದೆ’ ಎಂದೂ ಸೇನೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿಹೆಚ್ಚುವರಿ ಸೇನಾ ಸಿಬ್ಬಂದಿ ನಿಯೋಜಿಸಿರುವುದಕ್ಕೆ ಆತಂಕ ಬೇಡ ಎಂದು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಶನಿವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.