ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ಪ್ರಸ್ತಾವದ ವಿಚಾರವಾಗಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ ಎಂದು ಪ್ರತಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ಹೇಳಿದರು.
‘ಕಾಂಗ್ರೆಸ್ ಪಕ್ಷವು 1952 ಮತ್ತು 1962ರಲ್ಲಿ ಇಂಥದ್ದೇ ಪ್ರಕ್ರಿಯೆಗಳ ಮೂಲಕ ಸಂವಿಧಾನದ 370ನೇ ವಿಧಿಗೆ ತಿದ್ದುಪಡಿ ತಂದಿತ್ತು. ಪ್ರತಿಭಟಿಸುವ ಬದಲು ಚರ್ಚೆಗೆ ಬನ್ನಿ. ನನಗೆ ಮಾತನಾಡಲು ಬಿಡಿ. ನಿಮ್ಮೆಲ್ಲ ಗೊಂದಲ ಮತ್ತು ಸಂಶಯಗಳನ್ನು ಪರಿಹರಿಸುತ್ತೇನೆ’ ಎಂದು ಅವರು ಹೇಳಿದರು.
ಸಂವಿಧಾನದ 370ನೇ ವಿಧಿಯ ರಕ್ಷಣೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಹಲವು ವರ್ಷಗಳಿಂದ ಮೂರು ಕುಟುಂಬಗಳು ಲೂಟಿ ಮಾಡಿವೆ. ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು 370ನೇ ವಿಧಿಯು ಕಾಶ್ಮೀರವನ್ನು ಭಾರತದೊಡನೆ ಬೆಸೆದಿದೆ ಎಂದು ಹೇಳಿದ್ದಾರೆ. ಇದು ಸುಳ್ಳು. ಮಹಾರಾಜ ಹರಿಸಿಂಗ್ 27ನೇ ಅಕ್ಟೋಬರ್ 1947ರಲ್ಲಿ ಜಮ್ಮು ಕಾಶ್ಮೀರ ಒಪ್ಪಂದಕ್ಕೆ ಸಹಿ ಹಾಕಿದ್ದರು. 370ನೇ ವಿಧಿಯು 1954ರಲ್ಲಿ ಜಾರಿಯಾಯಿತು ಎಂದು ಶಾ ಹೇಳಿದರು.
ಕಾಶ್ಮೀರದಲ್ಲಿ ಬಿಗಿ ಭದ್ರತೆ:ರಾಜ್ಯಸಭೆಯಲ್ಲಿ ಪ್ರಸ್ತಾವ ಮಂಡನೆ ಮಾಡಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.ಉತ್ತರ ಪ್ರದೇಶ, ಒಡಿಶಾ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 8000ಕ್ಕೂ ಹೆಚ್ಚು ಅರೆಸೇನಾ ಸಿಬ್ಬಂದಿಯನ್ನು ಕಾಶ್ಮೀರ ಕಣಿವೆಗೆ ಕೇಂದ್ರ ಸರ್ಕಾರ ರವಾನಿಸಿದೆ. ಇನ್ನಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದುಎಎನ್‌ಐಸುದ್ದಿಸಂಸ್ಥೆ ವರದಿ ಮಾಡಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.