ADVERTISEMENT

ಪೌರತ್ವ ಕಾಯ್ದೆ ಜಾರಿ ಖಚಿತ: ಅಮಿತ್‌ ಶಾ

ಪಿಟಿಐ
Published 5 ಮೇ 2022, 19:32 IST
Last Updated 5 ಮೇ 2022, 19:32 IST
ಅಮಿತ್‌ ಶಾ
ಅಮಿತ್‌ ಶಾ   

ಸಿಲಿಗುರಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಹೇಳಿದ್ದಾರೆ. ವಿವಾದಾತ್ಮಕವಾದ ಸಿಎಎ ಜಾರಿಯ ವಿಚಾರವನ್ನು ಕೇಂದ್ರವು ಕೈಬಿಟ್ಟಿಲ್ಲ ಎಂಬುದನ್ನು ಈ ಮೂಲಕ ಅವರು ಸ್ಪಷ್ಟಪಡಿಸಿದರು.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವು ಸಿಎಎ ಕುರಿತು ಸುಳ್ಳು ಸುದ್ದಿ ಹರಡುತ್ತಿದೆ. ಸಿಎಎ ಜಾರಿಯೇ ಆಗದು ಎಂದು ಟಿಎಂಸಿ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

‘ಮಮತಾ ಅವರೇ, ಅಕ್ರಮ ಒಳನುಸುಳುವಿಕೆ ಮುಂದುವರಿಯಲಿ ಎಂದು ನೀವು ಭಾವಿಸಿದ್ದೀರಾ? ಸಿಎಎ ಖಂಡಿತವಾಗಿಯೂ ಜಾರಿಗೆ ಬರಲಿದೆ. ಅದನ್ನು ತಡೆಯಲು ಮಮತಾ ಅವರಿಗೆ ಸಾಧ್ಯವಿಲ್ಲ’ ಎಂದು ಶಾ ಹೇಳಿದರು.

ADVERTISEMENT

2019 ಮತ್ತು 2020ರಲ್ಲಿ, ಕೋವಿಡ್‌ ಸಾಂಕ್ರಾಮಿಕ ಆರಂಭಕ್ಕೆ ಮುಂಚೆ, ಸಿಎಎ ವಿರುದ್ಧ ಭಾರಿ ಪ್ರತಿಭಟನೆ ನಡೆದಿತ್ತು. ಆದರೆ, ಕೋವಿಡ್‌ ತಡೆಗಾಗಿ ಹೇರಿದ್ದ ಲಾಕ್‌ಡೌನ್ ಮತ್ತು ಇತರ ನಿರ್ಬಂಧಗಳಿಂದಾಗಿ ಪ್ರತಿಭಟನೆ ನಿಂತಿತ್ತು.

ಧರ್ಮದ ಆಧಾರದಲ್ಲಿ ಪೌರತ್ವ ನೀಡಲು ಅವಕಾಶ ಕೊಡುವ ಮಸೂದೆಯು ತಾರತಮ್ಯ ಧೋರಣೆಯನ್ನು ಹೊಂದಿದೆ ಎಂಬುದು ಈ ಕಾಯ್ದೆಯ ಕುರಿತು ಇರುವ ಪ್ರಮುಖ ಆಕ್ಷೇಪವಾಗಿದೆ. ಜತೆಗೆ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ2015ಕ್ಕೂ ಮೊದಲು ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡಿಕೆಯನ್ನು ತ್ವರಿತಗೊಳಿಸುತ್ತದೆ. ಕಾಯ್ದೆಯು ಜಾರಿಯಾದರೆ, ಲಕ್ಷಾಂತರ ಮುಸ್ಲಿಮರು ಪೌರತ್ವ ಕಳೆದುಕೊಳ್ಳುವ ಭೀತಿಯೂ ಇದೆ ಎಂದು ಕಾಯ್ದೆಯ ವಿರೋಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

‘ಹಕ್ಕಿಗೆ ಧಕ್ಕೆಯಾಗಲು ಬಿಡುವುದಿಲ್ಲ’: ‘ನಾಗರಿಕರ ಹಕ್ಕುಗಳನ್ನು ಮೊಟಕುಗೊಳಿಸಲು ನಾವು ಬಿಡುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಮಿತ್ ಶಾಗೆ ಸವಾಲು ಹಾಕಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಕೋವಿಡ್‌ ಇಳಿಮುಖವಾದ ನಂತರ ದೇಶದಲ್ಲಿ ಸಿಎಎ ಜಾರಿಗೆ ತರುತ್ತೇವೆ ಎಂದು ಹೇಳಿದ್ದ ಶಾ ಅವರಿಗೆ, ಮಮತಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

‘ನಮ್ಮ ನಾಗರಿಕರ ಹಕ್ಕುಗಳಿಗೆ ಧಕ್ಕೆಯಾಗುವುದನ್ನು ನಾವು ಬಯಸುವುದಿಲ್ಲ. ಶಾ ಒಂದು ವರ್ಷದ ನಂತರ ಇಲ್ಲಿಗೆ ಬಂದಿದ್ದಾರೆ. ಪ್ರತಿ ಬಾರಿ ಬರುತ್ತಾರೆ, ಕೆಟ್ಟ–ಕೆಟ್ಟ ಮಾತುಗಳನ್ನಾಡುತ್ತಾರೆ’ ಎಂದು ಮಮತಾ ಟೀಕಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.