ADVERTISEMENT

ಪೌರತ್ವ ತಿದ್ದುಪಡಿ ಮಸೂದೆ | ಭಾರತದ ಯಾವೊಬ್ಬ ಮುಸ್ಲಿಮನಿಗೂ ಭಯ ಬೇಡ: ಅಮಿತ್ ಶಾ

ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡಿಸಿದ ಗೃಹ ಸಚಿವ * ಕಾಂಗ್ರೆಸ್‌ನಿಂದ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 7:47 IST
Last Updated 11 ಡಿಸೆಂಬರ್ 2019, 7:47 IST
ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡಿದರು
ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡಿದರು   

ನವದೆಹಲಿ:‘ಪೌರತ್ವ ತಿದ್ದುಪಡಿ ಮಸೂದೆ’ ಬಗ್ಗೆಭಾರತದಲ್ಲಿರುವ ಯಾವನೇ ಮುಸ್ಲಿಂ ವ್ಯಕ್ತಿಯೂ ಭಯಪಡಬೇಕಾದದ್ದಿಲ್ಲ ಎಂದುಗೃಹ ಸಚಿವ ಅಮಿತ್ ಶಾ ಹೇಳಿದರು.

ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಿ ಮಾತನಾಡಿ ಅವರು, ‘ಈ ಮಸೂದೆ ಬಗ್ಗೆ ಯಾರಾದರೂ ಬೆದರಿಸಲು ಯತ್ನಿಸಿದರೆ ದೇಶದ ಮುಸ್ಲಿಮರು ಅದಕ್ಕೆ ಕಿವಿಗೊಡಬೇಡಿ. ಈ ಮೋದಿ ಸರ್ಕಾರವು ಸಂವಿಧಾನಕ್ಕೆ ಬದ್ಧವಾಗಿಯೇ ಕೆಲಸ ಮಾಡುತ್ತದೆ. ಅಲ್ಪಸಂಖ್ಯಾತರಿಗೆ ಪೂರ್ತಿ ರಕ್ಷಣೆ ದೊರೆಯಲಿದೆ’ ಎಂದು ಭರವಸೆ ನೀಡಿದರು.

‘ಪೌರತ್ವ ತಿದ್ದುಪಡಿ ಮಸೂದೆ ತರುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೆವು. ಇಂದು ನಾವು ಅದಕ್ಕೆ ಕಾನೂನಿನ ರೂಪ ನೀಡುತ್ತಿದ್ದೇವೆ. ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಒದಗಿಸಲು ನೆರವಾಗಲಿದೆ’ ಎಂದು ಹೇಳಿದರು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ಇಂದು ಶೇ 20ರಷ್ಟು ಕಡಿಮೆಯಾಗಿದೆ. ಒಂದೋ ಅವರ ಹತ್ಯೆಯಾಗಿರುವ ಸಾಧ್ಯತೆ ಇದೆ. ಅಥವಾ ಅವರು ಆಶ್ರಯ ಕೋರಿ ಭಾರತಕ್ಕೆ ಬಂದಿರಬಹುದು ಎಂದು ಶಾ ಹೇಳಿದರು.

ಅಸ್ಸಾಂನ ಹಕ್ಕುಗಳನ್ನು ರಕ್ಷಿಸುತ್ತೇವೆ:1985ರಲ್ಲಿ ಅಸ್ಸಾಂ ಒಪ್ಪಂದ ಏರ್ಪಟ್ಟಿತು. ಅದರ 6ನೇ ಕಲಂನಲ್ಲಿ ಸ್ಥಳೀಯ ಸಂಸ್ಕೃತಿ ರಕ್ಷಿಸಬೇಕು ಎಂಬ ಒಕ್ಕಣೆ ಇದೆ. ಎನ್‌ಡಿಎ ಸರ್ಕಾರವು ಅಸ್ಸಾಂನ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ಅಸ್ಸಾಂನ ಎಲ್ಲ ವಿದ್ಯಾರ್ಥಿ ಸಂಘಟನೆಗಳಿಗೆ ಭರವಸೆ ನೀಡುತ್ತಿದ್ದೇನೆ ಎಂದು ಅಮಿತ್ ಶಾ ಹೇಳಿದರು.

ಕಾಂಗ್ರೆಸ್ ವಿರೋಧ

ಪೌರತ್ವ ತಿದ್ದುಪಡಿ ಮಸೂದೆ ಭಾರತೀಯ ಸಂವಿಧಾನದ ಅಡಿಪಾಯದ ಮೇಲಿನ ಆಕ್ರಮಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ‘ಇದು ಭಾರತ ಗಣರಾಜ್ಯದ ಮೇಲಿನ ಹಲ್ಲೆ. ದೇಶದ ಆತ್ಮಕ್ಕೇ ಘಾಸಿ ಮಾಡಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು’ ಎಂದು ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ ಪ್ರತಿಪಾದಿಸಿದರು.

‘ನಮ್ಮ ಧರ್ಮದಲ್ಲಿ ನಾವು ಪುರ್ಜನ್ಮವನ್ನು, ನಮ್ಮ ಹಿರಿಯರನ್ನು ಭವಿಷ್ಯದಲ್ಲಿ ಭೇಟಿಯಾಗುತ್ತೇವೆ ಎಂಬುದನ್ನು ನಂಬುತ್ತೇವೆ. ಒಂದು ವೇಳೆ ಮೋದಿ ಅವರನ್ನುಸರ್ದಾರ್ ಪಟೇಲ್ ಭೇಟಿಯಾದರೆ ಕೋಪಗೊಳ್ಳಲಿದ್ದಾರೆ. ಗಾಂಧೀಜಿ ಭೇಟಿಯಾದರೆ ಬೇಸರಗೊಳ್ಳಲಿದ್ದಾರೆ. ಆದರೆ ಪಟೇಲ್ ಅಂತೂತುಂಬಾ ಕೋಪಗೊಳ್ಳಲಿದ್ದಾರೆ’ ಎಂದುಆನಂದ್ ಶರ್ಮಾ ಹೇಳಿದರು.

ಮಸೂದೆ ಮೇಲಿನ ಚರ್ಚೆಗೆ 6 ಗಂಟೆ ಕಾಲಾವಕಾಶ ನೀಡಲಾಗಿದೆ. ರಾತ್ರಿ ಒಳಗೆ ಮಸೂದೆಯನ್ನು ಮತಕ್ಕೆ ಹಾಕುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.