ಹೈದರಾಬಾದ್: ಆಧುನಿಕ ರಜಾಕರಿಂದ ತೆಲಂಗಾಣವನ್ನು ಬಿಜೆಪಿ ಮಾತ್ರ ರಕ್ಷಿಸಬಲ್ಲದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ತೆಲಂಗಾಣದ ಅದಿಲಾಬಾದ್‌ನಲ್ಲಿ ಹೇಳಿದರು.
ಹಿಂದಿನ ಹೈದರಾಬಾದ್ ರಾಜ್ಯದಲ್ಲಿ ನಿಜಾಮರ ಆಡಳಿತವಿದ್ದಾಗ ರಜಾಕರು ಹಿಂದೂಗಳ ಮೇಲೆ ಕ್ರೌರ್ಯ, ದೌರ್ಜನ್ಯ ಎಸಗಿದ್ದರು. ಹೈದರಾಬಾದ್ ರಾಜ್ಯ ಮತ್ತು ತೆಲಂಗಾಣದ ಇತಿಹಾಸದಲ್ಲಿ ರಜಾಕರಿದ್ದ ಇಡೀ ಅವಧಿಯನ್ನು ‘ಕರಾಳ ಕಥನ’ವೆಂದೇ ಪರಿಗಣಿಸಲಾಗುತ್ತದೆ.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ ಅವರು, ‘ಕೆಸಿಆರ್ ಅವರ ಚುನಾವಣಾ ಚಿಹ್ನೆ ಕಾರು. ಆದರೆ ಅದರ ಸ್ಟೀರಿಂಗ್ ವೀಲ್ ಮಾತ್ರ ಓವೈಸಿ ಬಳಿ ಇದೆ. ಇಂತಹ ಸರ್ಕಾರ ರಾಜ್ಯಕ್ಕೆ ಬೇಕಿದೆಯಾ? ಚಂದ್ರಶೇಖರ್ ರಾವ್‌ಜಿ, ದಲಿತರಿಗೆ ಮೂರು ಎಕರೆ ಜಮೀನು ನೀಡುವ ಗ್ಯಾರಂಟಿ ಏನಾಯಿತು? ಅವರು ದಲಿತರ ಬಗ್ಗೆ ದೊಡ್ಡ ಮಾತನಾಡುತ್ತಾರೆ. ಆದರೆ ದಲಿತರಿಗೆ ಒಳಿತನ್ನು ಮಾಡುವುದಿಲ್ಲ’ ಎಂದು ಹೇಳಿದರು.
ತೆಲಂಗಾಣದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಹೊಂದಲು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮತದಾರರನ್ನು ಒತ್ತಾಯಿಸಿದರು.
ಮುಖ್ಯಮಂತ್ರಿ ಚಂದ್ರಶೇಖರ್‌ರಾವ್ ಅವರು ಭ್ರಷ್ಟಾಚಾರದಲ್ಲಿ ಮತ್ತು ರೈತರ ಆತ್ಮಹತ್ಯೆಯಲ್ಲಿ ತೆಲಂಗಾಣವನ್ನು ಮೊದಲ ಸ್ಥಾನಕ್ಕೆ ತಂದಿದ್ದಾರೆ. ತಮ್ಮ ಮಗ ಕೆಟಿಆರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದರಲ್ಲೇ ಕೆಸಿಆರ್ ಮಗ್ನರಾಗಿದ್ದಾರೆ. ಬಡವರು, ದುರ್ಬಲವರ್ಗದವರ ಕಡೆ ಅವರ ಗಮನವಿಲ್ಲ ಎಂದು ಟೀಕಿಸಿದರು.
‘ಕೆಸಿಆರ್ ಅವರು ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡುತ್ತಾರೆ. ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಡಬಲ್ ಎಂಜಿನ್ ಸರ್ಕಾರ ತೆಲಂಗಾಣಕ್ಕೆ ಅಗತ್ಯವಿದೆ. ಡಬಲ್ ಎಂಜಿನ್ ಸರ್ಕಾರವೆಂದರೆ ಅಭಿವೃದ್ಧಿ ಮತ್ತು ಅಭಿವೃದ್ಧಿ’ ಎಂದರು.
ಕೆಸಿಆರ್ ಸರ್ಕಾರದ ನಡವಳಿಕೆಯಿಂದಾಗಿ ಗಿರಿಜನರ ವಿವಿ ಸ್ಥಾಪಿಸುವುದು ವಿಳಂಬವಾಯಿತು. ಕೆಸಿಆರ್ ಸರ್ಕಾರ ಈ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಈ ಸರ್ಕಾರ ಬಡವರು, ದಲಿತರು ಮತ್ತು ಗಿರಿಜನರ ಬಗ್ಗೆ ಗಮನ ಹರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ತೆಲಂಗಾಣದಲ್ಲಿ ನವೆಂಬರ್ 30ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.