ಚೆನ್ನೈ: ಉತ್ತರ ಚೆನ್ನೈನ ರಸಗೊಬ್ಬರ ತಯಾರಿಕಾ ಘಟಕದಿಂದ ಸಮುದ್ರಕ್ಕೆ ಹಾದುಹೋಗಿರುವ ಪೈಪ್‌ಲೈನ್‌ನಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಸ್ಥಳೀಯ ನಿವಾಸಿಗಳು ಅಸ್ವಸ್ಥರಾಗಿದ್ದು, 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ರಾತ್ರಿ 11.45ಕ್ಕೆ ಅನಿಲ ಸೋರಿಕೆಯಾಗಿದ್ದು, ಅತಿಯಾದ ದುರ್ಗಂಧದಿಂದ ಜನರು ಅಸ್ವಸ್ಥರಾಗಿದ್ದಾರೆ. ಕೆಲವರಲ್ಲಿ ಉಸಿರಾಟದ ತೊಂದರೆ, ಮೂರ್ಛೆ, ವಾಕರಿಕೆ, ಗಂಟಲು ಮತ್ತು ಎದೆಯಲ್ಲಿ ಉರಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮನೆಯೊಳಗೆ ಮಲಗಿದ್ದ ಜನರು ಆತಂಕಗೊಂಡು ರಸ್ತೆಗೆ ಓಡಿ ಬಂದಿದ್ದಾರೆ. ಮಕ್ಕಳು ಸೇರಿದಂತೆ ಅಸ್ವಸ್ಥರಾಗಿದ್ದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ಉತ್ತರ ಚೆನ್ನೈನ ಚಿನ್ನ ಕುಪ್ಪಂ, ಪೆರಿಯ ಕುಪ್ಪಂ, ನೇತಾಜಿ ನಗರ, ಬರ್ಮಾ ನಗರದ ನಿವಾಸಿಗಳು ಅನಿಲ ಸೋರಿಕೆಯಿಂದ ತೊಂದರೆ ಅನುಭವಿಸಿದ್ದಾರೆ. ಈ ಪ್ರದೇಶಗಳಲ್ಲಿ ಹೆಚ್ಚಾಗಿ ಮೀನುಗಾರರು ವಾಸಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಸಮುದ್ರದ ದಡದ ಸಮೀಪ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾಗಿದ್ದು, ಭಾರಿ ಸದ್ದು ಕೇಳಿಸಿದೆ. ನೀರು ಕೂಡ ಚಿಮ್ಮುತ್ತಿರುವುದನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
‘ರಸಗೊಬ್ಬರ ತಯಾರಿಕಾ ಘಟಕ ಆವರಣದಿಂದ ಹೊರಗೆ ಸಮುದ್ರಕ್ಕೆ ಹಾದುಹೋಗಿರುವ ಪೈಪ್‌ಲೈನ್‌ನಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಕೂಡಲೇ ಗುಣಮಟ್ಟ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಅನುಸರಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ’ ಎಂದು ಮುರುಗಪ್ಪ ಸಮೂಹದ ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ ತಿಳಿಸಿದೆ.
‘ಕೆಲವು ಮಂದಿ ಸ್ಥಳೀಯರು ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದಿದೆ.
ರಸಗೊಬ್ಬರ ತಯಾರಿಕಾ ಘಟಕವನ್ನು ಕೂಡಲೇ ಮುಚ್ಚಬೇಕೆಂದು ಆಗ್ರಹಿಸಿ ಸ್ಥಳೀಯರು ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.