ADVERTISEMENT

ಉತ್ತರ ಚೆನ್ನೈನಲ್ಲಿ ಅಮೋನಿಯಾ ಅನಿಲ ಸೋರಿಕೆ: 52 ಜನರು ಆಸ್ಪತ್ರೆಗೆ ದಾಖಲು

ಪಿಟಿಐ
Published 27 ಡಿಸೆಂಬರ್ 2023, 9:56 IST
Last Updated 27 ಡಿಸೆಂಬರ್ 2023, 9:56 IST
<div class="paragraphs"><p>ರಾಸಾಯನಿಕ ಗೊಬ್ಬರ ತಯಾರಿಕಾ ಘಟಕದ ಹೊರಗೆ ಸ್ಥಳೀಯರ ಪ್ರತಿಭಟನೆ</p></div>

ರಾಸಾಯನಿಕ ಗೊಬ್ಬರ ತಯಾರಿಕಾ ಘಟಕದ ಹೊರಗೆ ಸ್ಥಳೀಯರ ಪ್ರತಿಭಟನೆ

   

ಪಿಟಿಐ ಚಿತ್ರ

ಚೆನ್ನೈ: ತಮಿಳುನಾಡಿನ ಖಾಸಗಿ ರಾಸಾಯನಿಕ ಗೊಬ್ಬರ ತಯಾರಿಕಾ ಘಟಕಕ್ಕೆ ಸಂಬಂಧಿಸಿದ ಸಮುದ್ರದ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಉತ್ತರ ಚೆನ್ನೈನ ಹಲವು ನಿವಾಸಿಗಳು ಅಸ್ವಸ್ಥರಾಗಿದ್ದಾರೆ.

ADVERTISEMENT

52 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಉಸಿರಾಟದ ತೊಂದರೆ ಮತ್ತು ವಾಕರಿಕೆ ಲಕ್ಷಣಗಳು ಕಂಡುಬಂದಿವೆ.

ಮಂಗಳವಾರ ರಾತ್ರಿ 11.45ರ ಸುಮಾರಿಗೆ ಅನಿಲ ಸೋರಿಕೆಯಾಗಿದ್ದು, ಉತ್ತರ ಚೆನ್ನೈನಾದ್ಯಂತ ಗಾಳಿಯಲ್ಲಿ ಹರಡಿಕೊಂಡಿದೆ. ಹಲವರು ಗಂಟಲು ಮತ್ತು ಎದೆಯಲ್ಲಿ ಉರಿಯೂತದ ಅನುಭವವನ್ನು ಹೇಳಿಕೊಂಡರೆ, ಮತ್ತೆ ಕೆಲವರು ಪ್ರಜ್ಞೆತಪ್ಪಿದ್ದರು. ನಿದ್ರೆಯಲ್ಲಿದ್ದ ಜನರು ಗಾಬರಿಯಿಂದ ಎದ್ದು ತಮ್ಮ ಮನೆಗಳಿಂದ ಓಡಿ ಬಂದು ನೆರೆಹೊರೆಯವರನ್ನು ಎಚ್ಚರಿಸಿದ್ದಾರೆ. ಏನು ಮಾಡಬೇಕೆಂದು ತೋಚದೆ ಮುಖ್ಯ ರಸ್ತೆಗಳಿಗೆ ಓಡಿ ಬಂದಿದ್ದಾರೆ.

ಇತ್ತೀಚೆಗೆ ತೈಲ ಸೋರಿಕೆಯಿಂದ ಸಂಕಷ್ಟ ಅನುಭವಿಸಿದ್ದ ಉತ್ತರ ಚೆನ್ನೈನ ನಿವಾಸಿಗಳಿಗೆ ಈಗ ಅಮೋನಿಯಾ ಅನಿಲ ಸೋರಿಕೆ ಆತಂಕ ತಂದೊಡ್ಡಿದೆ. ರಸಗೊಬ್ಬರ ತಯಾರಿಕಾ ಘಟಕದ ಸಮೀಪದಲ್ಲಿ ವಾಸಿಸುತ್ತಿದ್ದ ಮಕ್ಕಳು ಸೇರಿದಂತೆ ಸುಮಾರು 52 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಹೆಚ್ಚಿನ ಜನರಿಗೆ ಉಸಿರಾಟದ ತೊಂದರೆ, ವಾಕರಿಕೆ ಲಕ್ಷಣ ಇದ್ದರೆ, ಮತ್ತೆ ಕೆಲವರು ಪ್ರಜ್ಞೆ ತಪ್ಪಿದ್ದರು. ಚಿನ್ನ ಕುಪ್ಪಂ, ಪೆರಿಯಾ ಕುಪ್ಪಂ, ನೇತಾಜಿ ನಗರ, ಬರ್ಮಾ ನಗರಗಳು ಅನಿಲ ಸೋರಿಕೆಯಿಂದ ಪರಿಣಾಮ ಎದುರಿಸಿದ ಪ್ರದೇಶಗಳಾಗಿವೆ.

ಜನರು ಮಧ್ಯರಾತ್ರಿಯಲ್ಲಿ ಸೂಕ್ತ ವಾಹನಗಳು ಸಿಗದೆ, ಆಟೋರಿಕ್ಷಾಗಳು ಮತ್ತು ಮೋಟಾರ್‌ಸೈಕಲ್‌ಗಳಲ್ಲಿಯೇ ಆಸ್ಪತ್ರೆಗೆ ತೆರಳಿದ್ದಾರೆ.

ವಾಂತಿಭೇದಿಯಿಂದ ವೃದ್ಧೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಸಗೊಬ್ಬರ ಘಟಕದಿಂದ ದೂರದಲ್ಲಿರುವ ಆಸ್ಪತ್ರೆಗಳಿಗೆ ಅಸ್ವಸ್ಥರನ್ನು ಕರೆತರಲು ಅಧಿಕಾರಿಗಳು ಬಸ್‌ಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ್ದಾರೆ.

ಬೀಚ್‌ ಸಮೀಪ ಇದ್ದ ಕೆಲವು ಮೀನುಗಾರರು ಮತ್ತು ಸ್ಥಳೀಯ ಜನರು ಸಮುದ್ರದಲ್ಲಿ ಪೈಪ್‌ಲೈನ್‌ ಇರುವ ಜಾಗದಿಂದ ಮಧ್ಯರಾತ್ರಿ ಅಸಾಮಾನ್ಯ ಶಬ್ಧ ಮತ್ತು ನೀರು ಚಿಮ್ಮುವುದನ್ನು ಗಮನಿಸಿದ್ದಾರೆ.

ಇಲ್ಲಿನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ಅನಿಲ ಸೋರಿಕೆಯಿಂದ ಅಸ್ವಸ್ಥರಾಗಿದ್ದ ಕೆಲ ಸ್ಥಳೀಯರಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಸಹಜ ಸ್ಥಿತಿಗೆ ಮರಳಿದ್ದಾರೆ. ಘಟನೆಯ ಬಗ್ಗೆ ನಾವು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕೋರಮಂಡಲ್ ಯಾವಾಗಲೂ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಕಂಪನಿಯು ಹೇಳಿದೆ.

ಈ ನಡುವೆ ಉದ್ರಿಕ್ತ ನಿವಾಸಿಗಳು ಇಂದು ಬೆಳಗ್ಗೆ ಗೊಬ್ಬರ ತಯಾರಿಕಾ ಕಂಪನಿ ಆವರಣದ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿ ಘಟಕವನ್ನು ಕೂಡಲೇ ಮುಚ್ಚುವಂತೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.