ADVERTISEMENT

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ‘ಆಮ್ನೆಸ್ಟಿ’

ಸರ್ಕಾರದಿಂದ ಮಾನವ ಹಕ್ಕುಗಳ ಸಂಸ್ಥೆಗಳ ಮೇಲೆ ನಿರಂತರವಾದ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 21:06 IST
Last Updated 29 ಸೆಪ್ಟೆಂಬರ್ 2020, 21:06 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಮಾನವ ಹಕ್ಕುಗಳ ಸಂಸ್ಥೆಯಾಗಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌, ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿರುವುದಾಗಿ ಮಂಗಳವಾರ ಘೋಷಿಸಿದೆ.

ಮಾನವ ಹಕ್ಕುಗಳ ಸಂಸ್ಥೆಗಳಿಗೆಸರ್ಕಾರ ನಿರಂತರವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿರುವ ಆಮ್ನೆಸ್ಟಿ, ‘ಸೆ.10ರಂದು ನಮ್ಮ ಬ್ಯಾಂಕ್‌ ಖಾತೆಗಳು ಸ್ಥಗಿತಗೊಂಡಿರುವುದು(ಫ್ರೀಜ್‌) ಗಮನಕ್ಕೆ ಬಂದಿದೆ. ಇದರಿಂದಾಗಿ ಅನಿವಾರ್ಯವಾಗಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಬೇಕಾದ ಸ್ಥಿತಿ ಎದುರಾಗಿದೆ. ಜೊತೆಗೆ ಎಲ್ಲ ಅಭಿಯಾನಗಳು ಹಾಗೂ ಸಂಶೋಧನಾ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಸುಳ್ಳು ಹಾಗೂ ಪ್ರಚೋದಿತ ಆರೋಪಗಳ ಮೂಲಕ ಭಾರತ ಸರ್ಕಾರವು ಮಾನವ ಹಕ್ಕುಗಳ ಸಂಸ್ಥೆಗಳ ಮೇಲೆ ನಿರಂತರವಾದ ದಾಳಿ ನಡೆಸುತ್ತಿದೆ. ಕಳೆದ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪ‍ಡೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಆಮ್ನೆಸ್ಟಿ ಹಲವು ಸರಣಿ ವರದಿಗಳನ್ನು ನೀಡಿತ್ತು. ಹೀಗಾಗಿ ನಮ್ಮ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಯಾವುದೇ ‘ಅಚಾತುರ್ಯವಲ್ಲ’ಎಂದು ಸಂಸ್ಥೆಯು ಉಲ್ಲೇಖಿಸಿದೆ.

ADVERTISEMENT

‘ಭಯ ಸೃಷ್ಟಿಸಲು ಹಾಗೂ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಉದ್ದೇಶದಿಂದ ಮಾನವ ಹಕ್ಕುಗಳ ಸಂಸ್ಥೆಗಳನ್ನು ಅಪರಾಧಿ ಉದ್ಯಮದ ರೀತಿ ಪರಿಗಣಿಸಲಾಗುತ್ತಿದೆ. ಜೊತೆಗೆ ಯಾವುದೇ ಸಾಕ್ಷ್ಯವಿಲ್ಲದೇ ವ್ಯಕ್ತಿಗಳನ್ನು ಅಪರಾಧಿಗಳು ಎಂದು ಘೋಷಿಸಲಾಗುತ್ತಿದೆ’ ಎಂದು ಆಮ್ನೆಸ್ಟಿ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಅವಿನಾಶ್‌ ಕುಮಾರ್‌ ಆರೋಪಿಸಿದ್ದಾರೆ.

ನಿಯಮ ಉಲ್ಲಂಘಿಸಿ ವಿದೇಶಿ ದೇಣಿಗೆ ಸಂಗ್ರಹಿಸಿದ ಆರೋಪದಡಿ2018ರಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬೆಂಗಳೂರಿನಲ್ಲಿರುವ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.