ಮುಂಬೈ: ಮುಂಬೈಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್(ಎನ್‍ಜಿಎಂಎ)ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತನಟ, ನಿರ್ದೇಶಕ ಅಮೋಲ್ ಪಾಲೇಕರ್ ಭಾಷಣಕ್ಕೆ ಎನ್‍ಜಿಎಂಎ ಸದಸ್ಯರು ಅಡ್ಡಿ ಪಡಿಸಿದ ಘಟನೆ ಶುಕ್ರವಾರ ನಡೆದಿದೆ.
ಕಲಾವಿದ ಪ್ರಭಾಕರ್ ಬರ್ವೆ ಅವರ ನೆನಪಿಗಾಗಿInside The Empty Box ಎಂಬ ಪ್ರದರ್ಶನವನ್ನು ಎನ್‍ಜಿಎಂಎಯಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪಾಲೇಕರ್, ಮುಂಬೈ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಸಲಹಾ ಸಮಿತಿಯನ್ನು ರದ್ದುಗೊಳಿಸಿದ್ದಕ್ಕಾಗಿ ಸಂಸ್ಕೃತಿ ಸಚಿವಾಲಯವನ್ನು ವಿಮರ್ಶಿಸಿದ್ದರು.
ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ, ಈ ಕಾರ್ಯಕ್ರಮವು ಕೊನೆಯ ಶೋ ಅಗಿದ್ದು ಇದನ್ನು ಕೆಲವು ಅಧಿಕಾರಿಶಾಹಿಗಳಾಗಲೀ ಅಥವಾ ಸರ್ಕಾರದ ಏಜೆಂಟ್‍ಗಳಾಗಲೀ ನಿರ್ಧರಿಸಿದ್ದಲ್ಲ. ಇದನ್ನು ನಿರ್ಧರಿಸಿದ್ದು ಸ್ಥಳೀಯ ಕಲಾವಿದರ ಸಲಹಾ ಸಮಿತಿ ಎಂದಿದ್ದಾರೆ.
ನವೆಂಬರ್ 13, 2018ರಂದು ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಪ್ರಾದೇಶಿಕ ಕೇಂದ್ರಗಳಲ್ಲಿರುವ ಸಲಹಾ ಸಮಿತಿಯನ್ನು ರದ್ದು ಮಾಡಲಾಗಿದೆ.
ಇದನ್ನು ಹೇಳುತ್ತಿದ್ದಂತೆ ಎನ್‍ಜಿಎಂಎ ಸದಸ್ಯರೊಬ್ಬರು ಎದ್ದು ನಿಂತು ಪಾಲೇಕರ್ ಅವರು ಕಾರ್ಯಕ್ರಮದ ಬಗ್ಗೆ ಮಾತ್ರ ಮಾತನಾಡಿದರೆ ಸಾಕು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪಾಲೇಕರ್, ನಾನು ಅದನ್ನೇ ಹೇಳಲು ಹೋಗುತ್ತಿದ್ದೇನೆ. ನೀವು ಇದಕ್ಕೂ ಸೆನ್ಸಾರ್ ಮಾಡುತ್ತಿದ್ದೀರಾ?
ನನಗೆ ಲಭಿಸಿದ ಮಾಹಿತಿ ಪ್ರಕಾರ ಸ್ಥಳೀಯ ಕಲಾವಿದರ ಸಲಹಾ ಸಮಿತಿಯನ್ನು ರದ್ದು ಮಾಡಿದ ನಂತರಕಲಾಕೃತಿ ಪ್ರದರ್ಶನ ಮಾಡಬೇಕಾದರೆ ದೆಹಲಿಯಲ್ಲಿರುವ ಸಂಸ್ಕೃತಿ ಇಲಾಖೆ ನಿರ್ಧರಿಸಬೇಕು ಎಂದಾಗ ಮಹಿಳೆಯೊಬ್ಬರು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಈ ವಿಷಯವನ್ನು ಇಲ್ಲಿ ಈಗ ಚರ್ಚೆ ಮಾಡುವಂತಿಲ್ಲ.ಕ್ಷಮಿಸಿ ಈ ಕಾರ್ಯಕ್ರಮ ಪ್ರಭಾಕರ್ ಬರ್ವೆ ಅವರ ಬಗ್ಗೆ ಇರುವುದು. ಅದರ ಬಗ್ಗೆ ಮಾತ್ರ ಮಾತನಾಡಿ ಎಂದಿದ್ದಾರೆ.
ಈ ನಡುವೆ ತಮ್ಮ ಮಾತುಗಳನ್ನು ನಿಲ್ಲಿಸಲು ನಿರಾಕರಿಸಿದ ಪಾಲೇಕರ್ , ನಯನ್ ತಾರಾ ಸೆಹಗಲ್ ಅವರನ್ನು ಮರಾಠಿ ಸಾಹಿತ್ಯದ ಸಮ್ಮೇಳನದಲ್ಲಿ ಮಾತನಾಡಲು ಆಮಂತ್ರಿಸಲಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಆ ಆಮಂತ್ರಣ ಹಿಂಪಡೆಯಲಾಯಿತು. ನಮ್ಮ ಇಂದಿನ ಪರಿಸ್ಥಿತಿಯ ಬಗ್ಗೆ ಅವರು ಟೀಕಿಸುತ್ತಾರೆ ಎಂದು ಸೆಹಗಲ್ ಅವರಿಗೆ ಆಮಂತ್ರಣ ನಿರಾಕರಿಸಲಾಗಿದೆ. ಅದೇ ಪರಿಸ್ಥಿತಿಯನ್ನು ನಾವು ಇಲ್ಲಿ ನಿರ್ಮಿಸುತ್ತಿದ್ದೇವೆಯೇ ಎಂದು ಪಾಲೇಕರ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.