ADVERTISEMENT

ಕರ್ನಾಟಕಕ್ಕೆ ಮೊದಲ ಅಮೃತ್ ಭಾರತ್ ರೈಲು

ಆರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಸುದೇಶ ದೊಡ್ಡಪಾಳ್ಯ
Published 30 ಡಿಸೆಂಬರ್ 2023, 18:56 IST
Last Updated 30 ಡಿಸೆಂಬರ್ 2023, 18:56 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ಅಯೋಧ್ಯೆ: ಮೊದಲ ಬಾರಿಗೆ ದೇಶದಲ್ಲಿ ಸಂಚಾರ ಆರಂಭಿಸಿದ ಅಮೃತ್ ಭಾರತ್‌ನ ಎರಡು ರೈಲುಗಳು ಹಾಗೂ ಆರು ವಂದೇ ಭಾರತ್ ರೈಲುಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹಸಿರು ನಿಶಾನೆ ತೋರಿಸಿದರು.

ಇಲ್ಲಿ ಮರುಅಭಿವೃದ್ಧಿಗೊಂಡಿರುವ ಅಯೋಧ್ಯಾ ಧಾಮ್ ಜಂಕ್ಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದರು.

ADVERTISEMENT

ಇದರಿಂದಾಗಿ, ಕರ್ನಾಟಕಕ್ಕೆ ಹೊಸದಾಗಿ ಮೂರು ರೈಲುಗಳ ಸೇವೆ ಲಭ್ಯವಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾದಿಂದ ಬೆಂಗಳೂರು (ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್) ನಡುವೆ ಅಮೃತ್ ಭಾರತ್ ರೈಲು ಸಂಚರಿಸಲಿದೆ. ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ಹಾಗೂ ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲುಗಳು ಓಡಾಡಲಿವೆ.

ದರ್ಭಾಂಗ್ - ಅಯೋಧ್ಯಾ ಧಾಮ್ ಜಂಕ್ಷನ್- ದೆಹಲಿ (ಆನಂದ ವಿಹಾರ್ ಟರ್ಮಿನಲ್) ನಡುವೆ ಮತ್ತೊಂದು ಅಮೃತ್ ಭಾರತ್ ರೈಲು  ಸಂಚರಿಸಲಿದೆ. ಶ್ರೀಮಾತಾ ವೈಷ್ಣೋದೇವಿ- ಕಾಟ್ರಾ, ಅಮೃತಸರ-ದೆಹಲಿ, ಜಲ್ನಾ-ಮುಂಬೈ, ಅಯೋಧ್ಯಾ ಧಾಮ್ ಜಂಕ್ಷನ್- ದೆಹಲಿ (ಆನಂದ ವಿಹಾರ್) ನಡುವೆ ವಂದೇ ಭಾರತ್ ರೈಲುಗಳು ಸಂಚರಿಸಲಿವೆ.

ಹೊಸದಾಗಿ ವಿನ್ಯಾಸಗೊಂಡಿರುವ ಕೇಸರಿ ಬಣ್ಣದ ಅಮೃತ್ ಭಾರತ್ ರೈಲುಗಳನ್ನು ಸಾಮಾನ್ಯ ವರ್ಗದ ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿ ಇರಿಸಿಕೊಂಡು ನಿರ್ಮಿಸಲಾಗಿದೆ. ಪ್ರತಿ ರೈಲು 22 ಕೋಚ್ ಗಳನ್ನು ಹೊಂದಿದ್ದು, 1834 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಕವಚ್ ತಂತ್ರಜ್ಞಾನದೊಂದಿಗೆ  ಆಕರ್ಷಕ ಒಳ ವಿನ್ಯಾಸ, ಉತ್ತಮ ಎಲ್ ಇ ಡಿ ಬೆಳಕು, ಸಿಸಿಟಿವಿ, ವಿವಿಧ ಬಗೆಯ ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್‌, ಉನ್ನತೀಕರಿಸಿದ ಶೌಚಾಲಯ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳು ಇವೆ. ವೇಗದ ಪಿಕಪ್ ಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್ ಗಳಿವೆ.

ಪ್ರಧಾನಿ ಮೋದಿ ಅವರು ಅಮೃತ್ ಭಾರತ್ ರೈಲಿನಲ್ಲಿದ್ದ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉತ್ತರ ಪ್ರದೇಶದ  ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಇದ್ದರು.

ಮಾದರಿ ರೈಲು ನಿಲ್ದಾಣ

  • ಅಯೋಧ್ಯಾ ಧಾಮ್ ಜಂಕ್ಷನ್ ಅನ್ನು ₹241 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ವಿಮಾನ ನಿಲ್ದಾಣ ಮಾದರಿಯಲ್ಲಿ ಮರುಅಭಿವೃದ್ಧಿಗೊಳಿಸಲಾಗಿದೆ.

  • ನಿಲ್ದಾಣವನ್ನು ಆಧ್ಯಾತ್ಮ ಪರಂಪರೆ ದೃಷ್ಟಿಯಲ್ಲಿ ರೂಪಿಸಲಾಗಿದೆ. 

  • ಫುಡ್ ಪ್ಲಾಜಾ, ಪೂಜಾ ಸಾಮಗ್ರಿಗಳ ಮಳಿಗೆ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಕಾಳಜಿ ಕೊಠಡಿ, ಆಧುನಿಕ ನಿರೀಕ್ಷಣಾ ಕೊಠಡಿ, ಅಂಗವಿಕಲ ಸ್ನೇಹಿ ಸೌಲಭ್ಯಗಳು, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳು ಇವೆ. ಇದು ಪರಿಸರಸ್ನೇಹಿ ಕಟ್ಟಡವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.